ಖಾಸಗಿ ಬಸ್​ ಪ್ರಯಾಣ ದರ ಶೇ.5 ಏರಿಕೆಗೆ ಚಿಂತನೆ

ಉಡುಪಿ ಸರ್ವೀಸ್​ ಬಸ್​ ನಿಲ್ದಾಣ. (ಸಾಂದರ್ಭಿಕ ಚಿತ್ರ).
ಉಡುಪಿ ಸರ್ವೀಸ್​ ಬಸ್​ ನಿಲ್ದಾಣ. (ಸಾಂದರ್ಭಿಕ ಚಿತ್ರ).
Published on

* ಅಧ್ಯಕ್ಷ ಸುರೇಶ್​ ನಾಯಕ್​ ಕುಯಿಲಾಡಿ ಮಾಹಿತಿ

* ಡೀಸೆಲ್​ ವೆಚ್ಚ ಸರಿದೂಗಿಸಲು ನಿರ್ಧಾರ

ಉಡುಪಿ: ಕೇಂದ್ರ ಸರ್ಕಾರ ಡೀಸೆಲ್​ ದರ ಏರಿಕೆ ಮಾಡಿದ್ದರಿಂದ ಖಾಸಗಿ ಬಸ್​ಗಳ ಪ್ರಯಾಣ ದರವೂ ಏರಿಕೆ ಆಗುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಕೇಂದ್ರ ಸರ್ಕಾರ ಲೀಟರ್​ಗೆ 3 ರೂ. ಏರಿಕೆ ಮಾಡಿದ್ದು, ಖಾಸಗಿ ಬಸ್​ನವರೂ ಸಹ ಶೇ.5ರಷ್ಟು ಪ್ರಯಾಣ ದರ ಏರಿಸಲು ಚಿಂತನೆ ನಡೆಸಿದ್ದೇವೆ ಎಂದು ರಾಜ್ಯ ಬಸ್​ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುರೇಶ್​ ನಾಯಕ್​ ಕುಯಿಲಾಡಿ ತಿಳಿಸಿದ್ದಾರೆ.
ಇರಾನ್​ ವಿರುದ್ಧ ಅಮೆರಿಕ-ಇಸ್ರೇಲ್​ ಜಂಟಿ ಸಮರ ಮುಂದುವರಿಸಿದ್ದರಿಂದ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ದರ ಏರಿಕೆ ಮಾಡಿದೆ. ಈ ಹಿಂದೆ ರಾಜ್ಯ ಕಾಂಗ್ರೆಸ್​ ಸರ್ಕಾರವೂ ಸಹ ಲೀಟರ್​ಗೆ 3ರೂ. ದರ ಏರಿಕೆ ಮಾಡಿತ್ತು. ಆದರೆ, ಖಾಸಗಿ ಬಸ್​ನವರು ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಪ್ರಸ್ತುತದ ಡೀಸೆಲ್​ ದರದಲ್ಲಿ ಈಗಿರುವ ಪ್ರಯಾಣ ದರವನ್ನೇ ಮುಂದುವರಿಸಿದರೆ ಅಪಾರ ನಷ್ಟ ಆಗಲಿದೆ. ಹೀಗಾಗಿ ಟಿಕೆಟ್​ ದರ ಏರಿಕೆ ಅನಿವಾರ್ಯ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸಭೆ
ಬಸ್​ ಪ್ರಯಾಣ ದರ ಏರಿಕೆಯ ವಿಚಾರವಾಗಿ ಮುಂದಿನ ವಾರ ಬೆಂಗಳೂರಿನಲ್ಲಿ ರಾಜ್ಯ ಬಸ್​ ಮಾಲೀಕರ ಸಂಘಗಳ ಒಕ್ಕೂಟದ ಸಭೆ ನಡೆಸಿ ನಿರ್ಧರಿಸಲಿದ್ದೇವೆ. ಟೋಲ್​ ಪಾವತಿ ಹಾಗೂ ಸೆಸ್​ ಪಾವತಿ ಆಧಾರದಲ್ಲಿ ಓರ್ವ ಪ್ರಯಾಣಿಕನಿಗೆ ಒಂದು ಕಿಮೀಗೆ 25 ಪೈಸೆ ಏರಿಕೆ ಮಾಡಲು ನಿಯಮಾನುಸಾರ ಅವಕಾಶವಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಬಸ್​ ಮಾಲೀಕರ ಸಂಘ ಮನವಿ ಸಲ್ಲಿಸಿದೆ ಎಂದು ಸುರೇಶ್​ ನಾಯಕ್​ ತಿಳಿಸಿದ್ದಾರೆ.
"

ರಾಜ್ಯ ಸರ್ಕಾರ ಹಿಂದೆ ಏರಿಕೆ ಮಾಡಿದ್ದ 3ರೂ. ಹಾಗೂ ಕೇಂದ್ರ ಸರ್ಕಾರದ ಈಗಿನ 3 ರೂ. ಏರಿಕೆ ಸೇರಿ ಒಟ್ಟು 6 ರೂ. ದರ ಲೀಟರ್​ ಡೀಸೆಲ್​ಗೆ ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ ದರದಲ್ಲಿ ವಾಹನ ಓಡಿಸಿದರೆ ನಷ್ಟ ಆಗುತ್ತದೆ. 6 ರೂ. ಏರಿಕೆಯಾದ ದರ ಸರಿದೂಗಿಸಲು ಪ್ರಯಾಣ ದರ ಏರಿಕೆ ಮಾಡಲಿದ್ದೇವೆ. ನಮಗೂ ಅನಿವಾರ್ಯ.

— ಸುರೇಶ್​ ನಾಯಕ್​ ಕುಯಿಲಾಡಿ. ರಾಜ್ಯ ಬಸ್​ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net