ಈಡೇರಿದ ದಶಕಗಳ ರಸ್ತೆ ಬೇಡಿಕೆ

 ಮಲಾರ್ ಬದ್ರಿಯಾನಗರ-ಅರಸ್ತಾನಕ್ಕೆ ಸಂಪರ್ಕ ಕಲ್ಪಿಸಿದ ನೂತನ ರಸ್ತೆ
ಮಲಾರ್ ಬದ್ರಿಯಾನಗರ-ಅರಸ್ತಾನಕ್ಕೆ ಸಂಪರ್ಕ ಕಲ್ಪಿಸಿದ ನೂತನ ರಸ್ತೆ
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪಾವೂರು ಗ್ರಾಮದಲ್ಲಿ ಕೇವಲ ಮುನ್ನೂರು ಮೀಟರ್ ಅಂತರದಲ್ಲಿರುವ ಒಂದು ಊರಿನಿಂದ ಮತ್ತೊಂದು ಊರಿಗೆ ವಾಹನದಲ್ಲಿ ಹೋಗಲು ಸುತ್ತು ಬಳಸಿ ನಾಲ್ಕೈದು ಕಿ.ಮೀ. ಪ್ರಯಾಣಿಸಬೇಕಿತ್ತು. ಆದರೆ ಈಗ ನೂತನ ರಸ್ತೆ ನಿರ್ಮಾಣಗೊಳ್ಳುವ ಮೂಲಕ ಸುತ್ತು ಬಳಸಿ ಹೋಗುವಕಷ್ಟ ತಪ್ಪಿದೆ. ಎರಡು ಊರುಗಳ ಜನತೆಯ ದಶಕಗಳ ಕನಸು ಈಡೇರಿದೆ.
ಪಾವೂರು ಗ್ರಾಮದ ಮಲಾರ್ ಬದ್ರಿಯಾ ನಗರದಿಂದ ಅರಸ್ತಾನಕ್ಕಿರುವ ಅಂತರ ಬರೇ 300 ಮೀಟರ್ ಮಾತ್ರ. ಆದರೆ ನಡುವೆ ತೋಟ, ಖಾಸಗಿ ಜಮೀನು ಕಾರಣ ವಾಹನದಲ್ಲಿ ಸುತ್ತು ಬಳಸಿ ಹೋಗುವುದು ಅನಿವಾರ್ಯ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಹಲವು ವರ್ಷಗಳಿಂದ ಸ್ಥಳೀಯರು ಜನಪ್ರತಿನಿಧಿಗಳ ಬಳಿ ಬೇಡಿಕೆ ಸಲ್ಲಿಸುತ್ತಾ ಬಂದರೂ ಖಾಸಗಿ ಜಾಗ ಅಡ್ಡಿಯಾಗಿತ್ತು.
ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಜಾಗಕ್ಕೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿದ್ದರು. ಇದರ ಫಲವಾಗಿ ದಿ.ಪಿ.ಎಂ.ಅಬ್ದುಲ್ ಖಾದರ್ ಅವರ ಕುಟುಂಬ ರಸ್ತೆಗೆ ಅಗತ್ಯವಿರುವ ತೋಟವನ್ನೇ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿತು. ಇನ್ನುಳಿದ ಜಾಗವನ್ನು ಕರೀಂ, ಮಹಮ್ಮದ್ ಬಿ. ಹಾಗೂ ಇಸ್ಮಾಯಿಲ್ ದೊಡ್ಡಮನೆ ನೀಡಲು ಒಪ್ಪಿದರು.
ಈ ಬಗ್ಗೆ ಮಾಹಿತಿ ಪಡೆದ ಸ್ಪೀಕರ್ ಯು.ಟಿ.ಖಾದರ್ ಸ್ವತಃ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅನುದಾನ ನೀಡಿದ ಪರಿಣಾಮ ನೂತನ ರಸ್ತೆ ನಿರ್ಮಾಣಗೊಂಡು ಎರಡು ಊರುಗಳ ಸಂಪರ್ಕ ಸುಲಭವಾಗಿದೆ.

ಉರುಸ್‌ಗೆ ಸಂಚಾರ ಸುಲಲಿತ

ಅರಸ್ತಾನದಲ್ಲಿ ದರ್ಗಾ ಇದ್ದು ಪ್ರತಿವರ್ಷ ಉರುಸ್ ನಡೆಸಲಾಗುತ್ತದೆ. ಹೊರ ಊರುಗಳಿಂದಲೂ ಜನರು ಆಗಮಿಸುತ್ತಾರೆ. ಇಲ್ಲಿನ ರಸ್ತೆ ಕಿರಿದಾಗಿರುವ ಕಾರಣ ವಾಹನದಲ್ಲಿ ಹೋಗುವವರು ಮಾತ್ರವಲ್ಲದೆ ಸಾರ್ವಜನಿಕರಿಗೂ ತೀವ್ರ ತೊಂದರೆ ಆಗುತ್ತಿತ್ತು. ನೂತನ ರಸ್ತೆ ಉರುಸ್ ಸಂದರ್ಭ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಒಂದು ರಸ್ತೆಯಿಂದ ದರ್ಗಾಕ್ಕೆ ಬಂದರೆ ಇನ್ನೊಂದು ರಸ್ತೆ ಮೂಲಕ(ವನ್ ವೇ) ಹೋಗುವ ವ್ಯವಸ್ಥೆ ಮಾಡಿದರೆ ವಾಹನ ಸಂಚಾರ ಸುಲಲಿತವಾಗಿ ಸಾಗಲಿದ್ದು ಮುಂದಿನ ಉರುಸ್‌ಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ.

ಪಾವೂರು ಗ್ರಾಮದ ಪ್ರತಿ ಗಲ್ಲಿಗೂ ರಸ್ತೆ ನಿರ್ಮಿಸಲಾಗಿದೆ. ಈಗ ನಿರ್ಮಾಣಗೊಂಡಿರುವ ರಸ್ತೆ ಭವಿಷ್ಯದಲ್ಲಿ ಅಂಬ್ಲಮೊಗರು ಗ್ರಾಮಕ್ಕೆ ಸಂಪರ್ಕ ರಸ್ತೆಯಾಗಿ ಮಾರ್ಪಡಲಿದೆ. ಅರಸ್ತಾನ ದರ್ಗಾ ಉರುಸ್ ಸಂದರ್ಭ ವಾಹನ ಸಂಚಾರ ಸುಗಮಗೊಳಿಸಲು ಸಹಕಾರಿ.

ಖಾದರ್ ಕಳೆದೆರಡು ವರ್ಷದಲ್ಲಿ ಪಾವೂರು ಗ್ರಾಮಕ್ಕೆ 19 ರಸ್ತೆಗಳನ್ನು ಮಂಜೂರು ಮಾಡಿದ್ದಾರೆ. ನೂತನ ರಸ್ತೆಗೆ 25 ಲಕ್ಷ ಅನುದಾನ ನೀಡಿದ್ದು ಎರಡು ಊರುಗಳ ಸಂಪರ್ಕಕೊಂಡಿಯಾಗಿದೆ. ನಾಲ್ಕು ಕುಟುಂಬದವರು ಜಾಗ ನೀಡಿದ್ದಾರೆ. ದಿ.ಪಿ.ಎಂ.ಅಬ್ದುಲ್ ಖಾದರ್ ಅವರ ಕುಟುಂಬ ತೋಟವನ್ನೇ ಬಿಟ್ಟುಕೊಟ್ಟಿದ್ದು ಅವರ ಹೆಸರನ್ನೇ ರಸ್ತೆಗೆ ಇಡಲು ಗ್ರಾ.ಪಂ. ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net