ಬೆಳ್ತಂಗಡಿ ಗೇರುಕಟ್ಟೆಯ ಬಾಲಕ ಸುಮಂತ್ ಸಾವು ಪ್ರಕರಣ

 ಸುಮಂತ್
ಸುಮಂತ್
Published on

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಗೇರುಕಟ್ಟೆ ಸಮೀಪದ ಸಂಭೋಳ್ಯದ ಸುಮಂತ್(15) ಸಂಶಯಾಸ್ಪದ ಸಾವು ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಬ್ರೈನ್ ಮ್ಯಾಪಿಂಗ್ ಹಾಗೂ ಮಂಪರು ಪರೀಕ್ಷೆ ಪ್ರಕ್ರಿಯೆ ಆರಂಭಿಸಲಾಗಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಕುಟುಂಬದ ಐವರನ್ನು ಈಗಾಗಲೇ ಬೆಂಗಳೂರಿಗೆ ಕರೆದೊಯ್ದು ಮೊದಲ ಹಂತದ ತನಿಖೆ ನಡೆಸಲಾಗಿದೆ. ಆ.10ರಂದು ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿ ಅವರನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬಳಿಕ ಸುಮಂತ್ ಸಹೋದರ ಸುದರ್ಶನ್ ಅವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಪ್ರಶ್ನಿಸಲಾಗಿದೆ.
ಆ.11ರಂದು ರತ್ನಾವತಿ ಸಹೋದರ ರಾಧಾಕೃಷ್ಣ ಹಾಗೂ ಸಂಬಂಧಿ ಲಕ್ಷ್ಮೀನಾರಾಯಣ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ಐವರಿಂದ ಪಡೆದ ಉತ್ತರಗಳು ಹಾಗೂ ತನಿಖೆ ವೇಳೆ ದಾಖಲಾದ ಮಾಹಿತಿಯನ್ನು ತಾಳೆಹಾಕಿ ಪರಿಶೀಲಿಸುವ ಕಾರ್ಯವನ್ನು ತಜ್ಞರು ನಡೆಸುತ್ತಿದ್ದಾರೆ.
ಮುಂದಿನ ಹಂತದ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆಗೆ ಹಾಜರಾಗುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಗುರುತಿಸಲಾಗಿರುವ ಇತರ ಶಂಕಿತರನ್ನೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೊಳಪಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ಬಗೆಹರಿಯದ ನಿಗೂಢತೆ

ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್, 2026ರ ಜ.14ರಂದು ಮುಂಜಾನೆ ಸಮೀಪದ ದೇವಳಕ್ಕೆ ಧನುಪೂಜೆಗಾಗಿ ತೆರಳಿದ್ದ ವೇಳೆ ನಿಗೂಢವಾಗಿ ಮೃತಪಟ್ಟಿದ್ದನು. ಬಾಲಕನ ಸಾವು ಸಹಜವಲ್ಲ, ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದತ್ತು. ಪೊಲೀಸರು ವಿಶೇಷ ತಂಡ ರಚಿಸಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಈವರೆಗೆ ಪ್ರಕರಣದ ನಿಗೂಢತೆಗೆ ಸ್ಪಷ್ಟ ಉತ್ತರ ದೊರೆತಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net