ಹಣ ಗಳಿಕೆಗಾಗಿ ಅಕ್ಷತಾ ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಳು. ಶ್ರೀಮಂತರನ್ನು ಪಣಜಿಗೆ ಕರೆಸಿ ಕ್ಯಾಸಿನೋಗಳಿಗೆ ಬರುವಂತೆ ಆಮಿಷ ಒಡ್ಡಿ, ಅವರು ಬಂದ ಬಳಿಕ ಹೋಟೆಲ್ಗೆ ಕರೆದುಕೊಂಡು ಹೋಗಿ ಮತ್ತು ಭರಿಸುವ ದ್ರವ ಅಥವಾ ಸಿಗರೇಟ್ ಸೇದಲು ಕೊಟ್ಟು ಪ್ರಜ್ಞೆ ತಪ್ಪಿಸುತ್ತಿದ್ದಳು. ಬಳಿಕ ಅವರ ಕುತ್ತಿಗೆಯಲ್ಲಿದ್ದ ಹಾಗೂ ಕೈಬೆರಳುಗಳಲ್ಲಿದ್ದ ಚಿನ್ನಾಭರಣ ದರೋಡೆ ಮಾಡುತ್ತಿದ್ದಳು ಎಂಬ ಆಘಾತಕಾರಿ ಸಂಗತಿಯೂ ತನಿಖೆಯಲ್ಲಿ ತಿಳಿದುಬಂದಿದೆ. ಗುಜರಾತ್ನ ಉದ್ಯಮಿ ತೋಮೇಶ್ ಯಾದವ್ ಎಂಬ ಉದ್ಯಮಿಯನ್ನೂ ಸಹ ಹನಿಟ್ರ್ಯಾಪ್ಗೆ ಸಿಲುಕಿಸಿ, ಗೋವಾಕ್ಕೆ ಕರೆಸಿ ಆತನ್ನನ್ನೂ ಪ್ರಜ್ಞೆ ತಪ್ಪಿಸಿ 2.40 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವುದೂ ಸಹ ಇದೀಗ ಬೆಳಕಿಗೆ ಬಂದಿದೆ. ಗೋವಾದಲ್ಲಿ ಕ್ಯಾಸಿನೋಗಳಿಗೆ ಬರುವ ಶ್ರೀಮಂತರನ್ನು ತನ್ನ ಬಲೆಗೆ ಬೀಳಿಸಿಕೊಂಡು ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ, ಪ್ರಜ್ಞೆ ತಪ್ಪಿಸಿ ಚಿನ್ನಾಭರಣ, ಹಣ ದರೋಡೆ ಮಾಡುವುದು, ಬಳಿಕ ಅವರಿಗೆ ಹನಿಟ್ರ್ಯಾಪ್ ಬೆದರಿಕೆ ಮೂಲಕ ಮತ್ತೆ ಹಣ ಕೀಳುವುದನ್ನೇ ಈ ಮಹಿಳೆ ದಂಧೆ ಮಾಡಿಕೊಂಡಿದ್ದ ಆತಂಕಕಾರಿ ಸಂಗತಿಯೂ ಗೋವಾ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.