ಉಡುಪಿಯಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ

ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾಹಿತಿ
dc meeting
ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿದರು.
Published on

ಉಡುಪಿ: ಜಿಲ್ಲೆಯಲ್ಲಿ 6 ಚಕ್ರ ಮತ್ತು ಮೇಲ್ಪಟ್ಟ 3785 ಸರಕು ಸಾಗಾಣಿಕೆ ವಾಹನಗಳಿದ್ದು, ಅವುಗಳಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. 1800 ಕ್ಕೂ ಹೆಚ್ಚು ಅಳವಡಿಕಿಗೆ ಬಾಕಿ ಇದೆ. ಮುಂದಿನ ಒಂದು ತಿಂಗಳ ಒಳಗಾಗಿ ಪ್ರತಿಯೊಂದು ವಾಹನಕ್ಕೂ ಸ್ಪೀಡ್​ ಗವರ್ನರ್​ ಅಳವಡಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿದ್ಧ ಕಾಂಕ್ರೀಟ್​ ಮಿಕ್ಸಿಂಗ್​ ವಾಹನಗಳು ಓವರ್​ ಲೋಡ್​ನಿಂದಾಗಿ ರಸ್ತೆ ಮೇಲೆ ಕಾಂಕ್ರೀಟ್​ ಎಲ್ಲೆಡೆ ಬಿದ್ದು ರಸ್ತೆ ಹಾಳಾಗುತ್ತಿದೆ. ಮರಳು ಸಾಗಾಣಿಕೆ ವಾಹನಗಳ ಓವರ್​ ಲೋಡ್​ನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಅಪಘಾತಗಳು ನಡೆಯುತ್ತಿವೆ. ಕಳೆದ ಮೂರು ತಿಂಗಳಲ್ಲಿ 1569 ವಾಹನಗಳ ತಪಾಸಣೆ ನಡೆಸಿ, 15 ಪ್ರಕರಣಗಳನ್ನು ದಾಖಲಿಸಿ, 3.33 ಲಕ್ಷ ರೂ. ದಂಡ ವಸೂಲಾತಿಯಾಗಿದೆ. ಈ ಬಗ್ಗೆ ಮುಂದಿನ ದಿವಸಗಳಲ್ಲಿ ತೀವ್ರ ತಪಾಸಣೆ ನಡೆಸುವಂತೆ ಸೂಚಿಸಿದರು.

ತಳ್ಳುಗಾಡಿಗಳ ಸ್ಥಳಾಂತರಕ್ಕೆ ಸೂಚನೆ

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅನಧಿಕೃತವಾಗಿರುವ ಗೂಡಂಗಡಿ, ಫಾಸ್ಟ್​ ುಡ್​ ಸೆಂಟರ್​, ತಳ್ಳುಗಾಡಿ ಹಾಗೂ ಗೂಡಂಗಡಿಗಳನ್ನು ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿ ಗುರುತಿಸಲಾದ 6 ವೆಂಡಿಂಗ್​ ಝೊನ್​ಗಳಿಗೆ ಸ್ಥಳಾಂತರಿಸಬೇಕು. ಈ ಝೊನ್​ಗಳಲ್ಲಿ ಶೀಘ್ರವಾಗಿ ಶೆಲ್ಟರ್​ಗಳನ್ನು ನಿರ್ಮಿಸಲು ಕ್ರಮವಹಿಸುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಮುಖ ಜಂಕ್ಷನ್​ಗಳಲ್ಲಿ ಸಿಗ್ನಲ್​ ಲೈಟ್​

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಮುಖ 5 ಜಂಕ್ಷನ್​ಗಳಿದ್ದು, ಕಲ್ಸಂಕ ಮತ್ತು ಮಣಿಪಾಲ ಸಿಂಡಿಕೇಟ್​ ಸರ್ಕಲ್​ ಜಂಕ್ಷನ್​ನಲ್ಲಿ ಈಗಾಗಲೇ ಟ್ರಾಫಿಕ್​ ಸಿಗ್ನಲ್​ ಅಳವಡಿಸಲಾಗಿದೆ. ಉಳಿದ ಸ್ಥಳಗಳಿಗೆ ಶ್ರೀ ಸಿಗ್ನಲ್​ ಹಾಕಬೇಕು. ಪಡುಬಿದ್ರೆ, ಕೋಟಾ, ಬ್ರಹ್ಮಾವರ ಹಾಗೂ ಕುಂದಾಪುರದ ಪ್ರಮುಖ ಜಂಕ್ಷನ್​ಗಳಲ್ಲಿ ಸಿಗ್ನಲ್​ ಲೈಟ್​ ಅಳವಡಿಸುವಂತೆ ಸೂಚನೆ ನೀಡಿದರು.

ಶಾಲಾ ಕಾಲೇಜು ಬಳಿ ವೇಗತಡೆ ಅಳವಡಿಸಿ

ಜಿಲ್ಲೆಯಲ್ಲಿರುವ ಶಾಲಾ-ಕಾಲೇಜುಗಳ ಪರಿಮಿತಿಯ ರಸ್ತೆಗಳಲ್ಲಿ ಸೂಚನಾ ಫಲಕಗಳು, ವೇಗತಡೆ ಉಬ್ಬುಗಳು, ಬ್ಯಾರಿಕೇಡ್​, ಝೀಬ್ರಾ ಪಟ್ಟಿ ಸೇರಿದಂತೆ ಮತ್ತಿತರ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ರಸ್ತೆ ಅಪಘಾತವಾಗುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸೂಚನಾ ಫಲಕ, ಹಂಪ್ಸ್​, ಬೀದಿ ದೀಪಗಳನ್ನು ಅಳವಡಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಹರಿರಾಮ್​ ಶಂಕರ್​, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್​ ಎಸ್​, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್​ ಅಜ್ಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net