ಡಿಸಿ ಮನ್ನಾ ಭೂಮಿಗಾಗಿ 25 ವರ್ಷಗಳಿಂದ ಹೋರಾಟ

 ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಸಭೆ ನಡೆಯಿತು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಐಟಿಡಿಪಿ ಅಧಿಕಾರಿ ಬಸವರಾಜ್, ಡಿವೈಎಸ್ಪಿ ರೋಹಿಣಿ ಸಿ.ಕೆ., ಸಮಾಜ ಕಲ್ಯಾಣ ಇಲಾಖೆಯ ಧನಂಜಯ ಇತರರು ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಸಭೆ ನಡೆಯಿತು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಐಟಿಡಿಪಿ ಅಧಿಕಾರಿ ಬಸವರಾಜ್, ಡಿವೈಎಸ್ಪಿ ರೋಹಿಣಿ ಸಿ.ಕೆ., ಸಮಾಜ ಕಲ್ಯಾಣ ಇಲಾಖೆಯ ಧನಂಜಯ ಇತರರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸರ್ಕಾರದ 2024ನೇ ಆದೇಶದಂತೆ ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಎರಡು ಎಕರೆ ಡಿಸಿ ಮನ್ನಾ ಭೂಮಿ ಹಾಗೂ ನಗರ ಪ್ರದೇಶದಲ್ಲಿ ಸೈಟ್ ನೀಡಬೇಕು ಎಂಬ ಆಗ್ರಹ ಬೆಳ್ತಂಗಡಿ ತಾ.ಪಂ. ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ-ಪಂಗಡದವರ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾಯಿತು.
ತಾಲೂಕಿನಲ್ಲಿ 481 ಎಕರೆಗಿಂತ ಅಧಿಕ ಡಿಸಿ ಮನ್ನಾ ಭೂಮಿ ಇದೀಗ ಲಭ್ಯವಿದೆ. ಅಲ್ಲಲ್ಲಿ ಅತಿಕ್ರಮಣವಾಗಿದೆ. ಅರಣ್ಯ ಇಲಾಖೆ ಬಳಿಯಲ್ಲಿಯೂ ಇದೆ. ಈ ಎಲ್ಲ ಜಮೀನನ್ನೂ ಸರ್ಕಾರ ವಶಕ್ಕೆ ತೆಗೆದುಕೊಂಡು ಸಮುದಾಯದ ಅರ್ಹರಿಗೆ ಹಂಚಿಕೆ ಮಾಡಬೇಕೆಂದು ಮುಖಂಡರು ಒತ್ತಾಯಿಸಿದರು.
25 ವರ್ಷಗಳಿಂದ ದಲಿತರು ಡಿಸಿ ಮನ್ನಾ ಭೂಮಿಗೆ ಹೋರಾಟ ನಡೆಸುತ್ತಿದ್ದರೂ ಈ ಸಮಸ್ಯೆ ಬಗೆಹರಿದಿಲ್ಲ ಎಂದು ಬಿ.ಕೆ.ವಸಂತ, ಸಂಜೀವ ಆರ್., ಶೇಖರ ಕುಕ್ಕೇಡಿ, ಸಿ.ಕೆ.ಚಂದ್ರಕಲಾ, ರಾಜು ಪಡಂಗಡಿ, ಬೇಬಿ ಸುವರ್ಣ, ಪ್ರಸಾದ್ ನಾಯ್ಕ ಮತ್ತಿತರರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಸರ್ಕಾರಕ್ಕೆ ಮಾಹಿತಿ: 1996ರಿಂದ ಜಿಲ್ಲೆಯಲ್ಲಿ 8509 ಎಕರೆ ಡಿಸಿ ಮನ್ನಾ ಭೂಮಿಯನ್ನು ಗುರುತಿಸಲಾಗಿದ್ದು ಇದರಲ್ಲಿ 7,366 ಎಕರೆ ಹಂಚಿಕೆ ಮಾಡಲಾಗಿದೆ. 2,800 ಫಲಾನುಭವಿಗಳ ಅರ್ಜಿ ಬಾಕಿ ಇದ್ದು ಈ ಪೈಕಿ 1977 ಮಂದಿ ಕೃಷಿಗೆ ಹಾಗೂ 375 ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ನೀಡುವಷ್ಟು ಅಗತ್ಯ ಭೂಮಿ ಇಲ್ಲದ ಕಾರಣ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಭೂಮಿ ಕೊರತೆ ಇರುವುದರಿಂದ ಎಲ್ಲರಿಗೂ ಸೈಟ್ ಹಂಚಿಕೆಗೆ ಪ್ರಯತ್ನ ನಡೆಯುತ್ತಿದೆ. ಡಿಸಿ ಮನ್ನಾ ಭೂಮಿಗೆ ಅರ್ಜಿ ಸಲ್ಲಿಸಲು ಇನ್ನಷ್ಟು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಉತ್ತರಿಸಿದರು.

ಪುತ್ತೂರು ಎಸಿ ಸೂಕ್ತವಾಗಿ ಸ್ಪಂದಿಸದ ಕಾರಣ ಕಡತಗಳು ವಿಲೇವಾರಿ ಆಗುತ್ತಿಲ್ಲ. ಕೆಸಿಡಿಸಿಗೆ ಲೀಸ್‌ಗೆ ಕೊಟ್ಟ ಜಾಗಗಳಲ್ಲಿ ಗೇರು ಕೃಷಿ ಇಲ್ಲದ ಕಾರಣ ಆ ಜಾಗಗಳನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಡಿಸಿ ತಾಲೂಕು ಕೇಂದ್ರಕ್ಕೆ ತಿಂಗಳಿಗೆ ಒಂದು ಬಾರಿ ಭೇಟಿ ನೀಡಬೇಕು. ಅಂಬೇಡ್ಕರ್ ಭವನಗಳ ನಿರ್ಮಾಣ ಮತ್ತಿತರ ವಿಚಾರಗಳ ಕುರಿತು ಮುಖಂಡರಾದ ಶ್ರೀಧರ ಕಳೆಂಜ, ಕೂಸ, ಶ್ರೀನಿವಾಸ, ಸಂತೋಷ್ ಕುಮಾರ್, ಸೇಸಪ್ಪ ನಲಿಕೆ, ನೇಮಿರಾಜ,ಪುಷ್ಪರಾಜ, ಶಿವಪ್ಪ, ಗಣೇಶ್ ಪ್ರಸಾದ್, ವಸಂತ ಬೆಳಾಲು, ಶೇಖರ ಲಾಯಿಲ ಮತ್ತಿತರರು ಚರ್ಚಿಸಿದರು.
ಐಟಿಡಿಪಿ ಅಧಿಕಾರಿ ಬಸವರಾಜ್, ಡಿವೈಎಸ್ಪಿ ರೋಹಿಣಿ ಸಿ.ಕೆ., ಸಮಾಜ ಕಲ್ಯಾಣ ಇಲಾಖೆಯ ಧನಂಜಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ತಾಪಂ ಇಒ ಭವಾನಿ ಶಂಕರ ಸ್ವಾಗತಿಸಿದರು.

ಹಲವು ಅಹವಾಲುಗಳು

ಪಿಲ್ಯ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದರಿಂದ ಅಪಾಯದ ಸ್ಥಿತಿ ಇದೆ. ಇದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸುವಾಗ ಎಸ್ಸಿ-ಎಸ್ಟಿಗೆ ಮೀಸಲಾತಿ ಕಲ್ಪಿಸಬೇಕು. ಬೆಳ್ತಂಗಡಿ ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ವೇತನವನ್ನು ಎಸ್‌ಸ್ಸಿ-ಎಸ್ಟಿ ಅನುದಾನದಲ್ಲಿ ನೀಡಲಾಗುತ್ತಿದೆ. ನಗರದಲ್ಲಿ ಹಕ್ಕುಪತ್ರ ಕೊಟ್ಟರೂ ಜಾಗ ಇಲ್ಲ. ಲಾಯಿಲ ಗ್ರಾಮಕ್ಕೆ ಕೃಷಿ ಇಲಾಖೆಯಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ. ಪುತ್ರಬೈಲಿನಲ್ಲಿ ಕಿಂಡಿಅಣೆಕಟ್ಟನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಕರಂಬಾರು ಗ್ರಾಮದಲ್ಲಿ ಅಕ್ರಮ-ಸಕ್ರಮ ಪ್ರಕ್ರಿಯೆ ನಡೆಯದೆ 25 ದಲಿತ ಕುಟುಂಬಗಳಿಗೆ ಸಮಸ್ಯೆ ಉಂಟಾಗಿದೆ. ಕರಂಬಾರು ಗ್ರಾಮಕ್ಕೆ ಹೆಚ್ಚುವರಿ ಬಸ್ ಬೇಕು ಮತ್ತಿತರ ಅಹವಾಲುಗಳನ್ನು ಸಲ್ಲಿಸಲಾಯಿತು.

ತಾಲೂಕು ಹಂತದ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಸ್ಯೆಗಳಿಗೆ ಒಂದು ತಿಂಗಳ ಒಳಗೆ ಪರಿಹಾರ ನೀಡುವ ಯೋಜನೆ ರೂಪಿಸಲಾಗಿದ್ದು ಯಾವುದಾದರೂ ಅಗತ್ಯ ಕಾರ್ಯಗಳು ಬಾಕಿಯಾದಲ್ಲಿ ಕಾರಣ ವಿವರಿಸಿ ಹಿಂಬರಹ ನೀಡಲಾಗುವುದು. ಗ್ರಾಮಸಭೆಗಳಲ್ಲಿ ಅಗತ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಜನರಿಗೆ ಸೂಕ್ತ ಮಾಹಿತಿ ಒದಗಿಸಬೇಕು.

— ದರ್ಶನ್ ಎಚ್.ವಿ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net