ಹೆದ್ದಾರಿಯಲ್ಲಿ ಕತ್ತಲೆ ಪ್ರಯಾಣ

 ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿಯಲ್ಲಿ ಬೀದಿದೀಪ ಉರಿಯದಿರುವುದರಿಂದ ತ್ರಾಸಿ ಜಂಕ್ಷನ್ ಕತ್ತಲಿನಲ್ಲಿ ಮುಳುಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿಯಲ್ಲಿ ಬೀದಿದೀಪ ಉರಿಯದಿರುವುದರಿಂದ ತ್ರಾಸಿ ಜಂಕ್ಷನ್ ಕತ್ತಲಿನಲ್ಲಿ ಮುಳುಗಿದೆ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ- ಬೈಂದೂರುವರೆಗಿನ ಹಾದಿಯುದ್ದಕ್ಕೂ ಹಲವೆಡೆ ಬೀದಿ ದೀಪಗಳು ಇದ್ದು ಇಲ್ಲದಂತಾಗಿವೆ. ಹೆದ್ದಾರಿಯ ಅಲ್ಲಲ್ಲಿ ಅಳವಡಿಸಿದ ಬೀದಿ ದೀಪಗಳು ಒಂದು ತಿಂಗಳೊಳಗೆ ಕೆಟ್ಟು ಹೋಗುತ್ತಿದ್ದು, ಹೆದ್ದಾರಿ ಬೀದಿದೀಪಗಳ ಅವ್ಯವಸ್ಥೆ ಬಗ್ಗೆ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಕುಂದಾಪುರದಿಂದ ಶಿರೂರುವರೆಗಿನ ಹೆದ್ದಾರಿ ಕಾಮಗಾರಿಯನ್ನು ಐಆರ್‌ಬಿ ಸಂಸ್ಥೆ ನಿರ್ವಹಿಸುತ್ತಿದ್ದು, ಬೀದಿ ದೀಪ ಅಳವಡಿಕೆ, ನಿರ್ವಹಣೆಯ ಹೊಣೆ ಅವರದ್ದು. ಪ್ರಮುಖ ಜಂಕ್ಷನ್‌ಗಳಾದ ತಲ್ಲೂರು, ಹೆವ್ಮಾಡಿ, ಮುಳ್ಳಿಕಟ್ಟೆ, ಅರಾಟೆ, ತ್ರಾಸಿ, ಮರವಂತೆ ಮೊದಲಾದ ಕಡೆಗಳಲ್ಲಿ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ಅಳವಡಿಸಲಾದ ದೀಪಗಳಲ್ಲಿ ಕೆಲವೊಂದು ಈಗಾಗಲೇ ಕೆಟ್ಟು ಹೋಗಿ, ಬಹಳ ದಿನಗಳೇ ಆಗಿವೆ. ಹೆದ್ದಾರಿಯ ಪ್ರಮುಖ ಜಂಕ್ಷನ್, ಪೇಟೆ ಆಸುಪಾಸಿನಲ್ಲಿ, ಡಿವೈಡರ್ ಕ್ರಾಸಿಂಗ್ ಇರುವ ಕಡೆಗಳಲ್ಲಿ ಬೀದಿ ದೀಪ ಇಲ್ಲದಿರುವುದರಿಂದ ಪಾದಚಾರಿಗಳಿಗೆ ರಸ್ತೆ ಬದಿ ನಡೆದು ಹೋಗಲು, ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ. ಇನ್ನು ರಾತ್ರಿ ವೇಳೆ ಸೈಕಲ್ ಸವಾರರ ಪಾಡಂತೂ ಶೋಚನೀಯವಾಗಿದೆ.
ವಿದ್ಯುತ್ ಕಂಬಗಳಿಗೆ ಹಾಕಿದ ಬೀದಿ ದೀಪಗಳು ಒಂದು ತಿಂಗಳೊಳಗೆ ಹಾಳಾಗುತ್ತಿರುವುದು ಉದ್ದೇಶಪೂರ್ವಕವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ವಹಿಸಿಕೊಂಡ ಐಆರ್‌ಬಿ ಸಂಸ್ಥೆ ಹಾಗೂ ಹೆದ್ದಾರಿ ಪ್ರಾಧಿಕಾರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ರಾ.ಹೆ.66ರಲ್ಲಿ ಅಳವಡಿಸಿದ ದಾರಿದೀಪ ಹಾಳಾಗಿ ತಿಂಗಳುಗಳೇ ಕಳೆದಿವೆ. ಇದರಿಂದ ಪ್ರಮುಖ ತ್ರಾಸಿ ಜಂಕ್ಷನ್ ಪರಿಸರ ಕತ್ತಲಲ್ಲಿ ಮುಳುಗಿದೆ. ಪಾದಚಾರಿಗಳು ಹಾಗೂ ಪ್ರಯಾಣಿಕರು ಇದರಿಂದ ತೊಂದರೆ ಅನುಭವಿಸುತ್ತಿದ್ದು, ಹಾಳಾದ ದಾರಿದೀಪಗಳನ್ನು ತಕ್ಷಣ ದುರಸ್ತಿ ವಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net