

ಉಡುಪಿ: ಮನಿ ಲಾಂಡರಿಂಗ್ ಮತ್ತು ಡ್ರಗ್ಸ್ ಕೇಸ್ ಇದೆ ಎಂದು ನಂಬಿಸಿ, ದೆಹಲಿ ಸಿಬಿಐ ಹಾಗೂ ಪೊಲೀಸರ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡಿ ಬೆದರಿಸಿದ ಸೈಬರ್ ವಂಚಕರು ಉಡುಪಿಯ ವ್ಯಕ್ತಿಯೊಬ್ಬರಿಂದ ಒಟ್ಟು 15,98,976 ರೂ. ಹಣವನ್ನು ಕೊಳ್ಳೆಹೊಡೆದಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಶೇಷಾಚಲ (51) ಎಂಬುವವರಿಗೆ ಅ. 18ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಕರೆ ಬಂದಿದೆ. ಹಿಂದಿಯಲ್ಲಿ ಮಾತನಾಡಿದ ಆ ವ್ಯಕ್ತಿ, ದೆಹಲಿಯಲ್ಲಿ ನಿಮ್ಮ ಹೆಸರಿನಲ್ಲಿ ಐಸಿಐಸಿಐ ಬ್ಯಾಂಕ್ ಪಾಸ್ಬುಕ್ ಸಿಕ್ಕಿದೆ. ಪಂಕಜ್ ಶಮಾರ್ ಎನ್ನುವವರ ಹೆಸರಿನ ಮನಿ ಲಾಂಡರಿಂಗ್, ಡ್ರಗ್ಸ್ ಹಾಗೂ ಚೈಲ್ಡ್ ಕಿಡ್ನಾಪಿಂಗ್ ಪ್ರಕರಣದಲ್ಲಿ ನಿಮ್ಮ ಹೆಸರಿದೆ ಎಂದು ಹೇಳಿದ್ದಾನೆ. ದೆಹಲಿ ಸಿಬಿಐ ಪೊಲೀಸರು ಕೂಡಲೇ ನಿಮ್ಮನ್ನು ಬಂಧಿಸಲು ಕೋರ್ಟ್ನಿಂದ ವಾರೆಂಟ್ ಹೊರಡಿಸಲಾಗಿದೆ. ತಕ್ಷಣ ದೆಹಲಿಗೆ ಬನ್ನಿ, ಇಲ್ಲವಾದರೆ ವಿಡಿಯೋ ಕಾಲ್ ಮೂಲಕ ತನಿಖೆಗೆ ಸಹಕರಿಸಿ ಎಂದು ಹೆದರಿಸಿದ್ದಾರೆ.
ವಂಚಕರ ಮಾತಿಗೆ ಬೆಚ್ಚಿಬಿದ್ದ ಶೇಷಾಚಲ ಹೆಂಡತಿಯ ಮೊಬೈಲ್ ನಂಬರ್ ನೀಡಿದ್ದಾರೆ. ಕೂಡಲೇ ಆ ನಂಬರ್ಗೆ ಬಂದ ವಿಡಿಯೋ ಕರೆಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿ ತಾನು ದೆಹಲಿ ಪೊಲೀಸ್ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಪ್ರತಿ ಗಂಟೆಗೊಮ್ಮೆ ನಮಗೆ ಸಂದೇಶ ಕಳುಹಿಸಬೇಕು, ಈ ವಿಚಾರವನ್ನು ಯಾರಿಗೂ ಹೇಳಬಾರದು, ಹೇಳಿದರೆ ನಿಮಗೆ ದೊಡ್ಡ ಅಪಾಯ ಕಾದಿದೆ ಎಂದು ಬೆದರಿಸಿ ನಿರಂತರವಾಗಿ ವಿಡಿಯೋ ಕಾಲ್ ಮಾಡುತ್ತಿದ್ದರು. ಶೇಷಾಚಲ ಅವರ ಬಳಿಯಿದ್ದ ಹಣ, ಚಿನ್ನ ಹಾಗೂ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದಾರೆ. ನಿಮ್ಮ ಬಳಿ ಇರುವ ಎಲ್ಲಾ ಹಣವನ್ನು ಆರ್ಬಿಐ ತನಿಖೆಗಾಗಿ ನಾವು ನೀಡಿದ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಆರೋಪಿಗಳು ಸೂಚಿಸಿದ್ದಾರೆ. ಇದನ್ನು ನಂಬಿದ ಶೇಷಾಚಲ ಅವರು ತನ್ನ ಬ್ಯಾಂಕ್ ಖಾತೆಯಿಂದ 11,00,000 ರೂ. ಹಣವನ್ನು ಆರೋಪಿಗಳ ಯೆಸ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಮತ್ತೊಮ್ಮೆ ಅಪರಿಚಿತರು ಸೂಚಿಸಿದ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 4,98,976 ರೂ. ವರ್ಗಾಯಿಸಿದ್ದಾರೆ.