

ಉಡುಪಿ: ರಾಜ್ಯಾದ್ಯಂತ ಶಾಲೆಗಳಿಗೆ ಅಕ್ಟೋಬರ್ ತಿಂಗಳ ರಜೆ ಇರುವುದರಿಂದ ಹಾಗೂ ವಾರಾಂತ್ಯ, ಶರನ್ನವರಾತ್ರಿ ನಿಮಿತ್ತ ಉಡುಪಿ ಜಿಲ್ಲೆಯತ್ತ ಪ್ರವಾಸಿಗರು ಮತ್ತು ಭಕ್ತರ ದಂಡು ಹೆಚ್ಚುತ್ತಿದೆ.
ಜಿಲ್ಲೆಯ ಪ್ರಮುಖ ದೇಗುಲ ಹಾಗೂ ಪ್ರವಾಸಿ ತಾಣಗಳಲ್ಲಿ ಜನಜಂಗುಳಿಯಿಂದ ತುಂಬಿಹೋಗಿವೆ. ಮಲ್ಪೆ, ಕಾಪು, ಮರವಂತೆ ಸೇರಿದಂತೆ ಇನ್ನಿತರ ಬೀಚ್ಗಳಲ್ಲಿ ಪ್ರವಾಸಿಗರ ಕಲರವ ಕಂಡುಬರುತ್ತಿದೆ. ಉಡುಪಿ ಶ್ರೀಕೃಷ್ಣ ಮಠಕ್ಕೂ ಪ್ರತಿನಿತ್ಯ ಭಕ್ತರ ಪ್ರವಾಹ ಹೆಚ್ಚುತ್ತಿದೆ.
ನವರಾತ್ರಿಯ ಸಂದರ್ಭವೂ ಆಗಿದ್ದರಿಂದ ಜಿಲ್ಲೆಯ ಪ್ರಮುಖ ದೇವಿ ದೇವಾಲಯಗಳಾದ ಕೊಲ್ಲೂರು ಮೂಕಾಂಬಿಕಾ, ಉಡುಪಿ ಕಡಿಯಾಳಿಯ ಮಹಿಷಮರ್ಧಿನಿ ದೇಗುಲ, ಬೈಲೂರು, ಕುಂಜಾರುಗಿರಿ ಸೇರಿದಂತೆ ಇನ್ನಿತರ ದೇವಿ ಸನ್ನಿಧಿಗಳು ರಷ್ ಆಗಿದೆ.
ಉಚ್ಚಿಲದ ಮಹಾಲಕ್ಷ್ಮೀ ದೇಗುಲದಲ್ಲಿ ದಸರಾ ಮಹೋತ್ಸವ ಇರುವುದರಿಂದ ಹಾಗೂ ವಿವಿಧ ಬಗೆಯ ಸ್ಪರ್ಧೆ, ಮಳಿಗೆ, ಕಲಾ ಮೇಳಗಳೂ ಇರುವುದರಿಂದ ಜನರು ಸಹಸ್ರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ನವರಾತ್ರಿಯಾಗಿದ್ದರಿಂದ ಬಹುತೇಕ ಎಲ್ಲ ದೇವಾಲಯಗಳಲ್ಲೂ ಮಧ್ಯಾಹ್ನ ಅನ್ನ ಸಂತರ್ಪಣೆ ಇದ್ದು, ಯಾತ್ರಿಕರು ಹಾಗೂ ಪ್ರವಾಸಿಗರು ಬೆಳಗ್ಗೆ ಸಮಯದಲ್ಲಿ ದೇಗುಲ ಭೇಟಿ, ಪ್ರಸಾದ ಭೋಜನ ಸ್ವೀಕರಿ ಮಧ್ಯಾಹ್ನದ ಬಳಿಕ ಬೀಚ್ ಇನ್ನಿತರ ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ.