ರಸ್ತೆ ಬದಿಯಲ್ಲಿ ಬಾವಿ ಸೃಷ್ಟಿ

 ಮಣಿಭಾಂಡಕಟ್ಟೆ ರಸ್ತೆಯ ಕಟ್ಟೆ ಎಂಬಲ್ಲಿ ಭಾರಿ ಮಳೆಯ ಪರಿಣಾಮ ರಸ್ತೆಯ ಮಧ್ಯಭಾಗದಲ್ಲೇ ಬೃಹತ್ ನೆಲ ಕುಸಿತ ಸಂಭವಿಸಿದೆ.
ಮಣಿಭಾಂಡಕಟ್ಟೆ ರಸ್ತೆಯ ಕಟ್ಟೆ ಎಂಬಲ್ಲಿ ಭಾರಿ ಮಳೆಯ ಪರಿಣಾಮ ರಸ್ತೆಯ ಮಧ್ಯಭಾಗದಲ್ಲೇ ಬೃಹತ್ ನೆಲ ಕುಸಿತ ಸಂಭವಿಸಿದೆ.
Published on
ಕಡಬ: ತಾಲೂಕಿನ ಕೊಂಬಾರು ಗ್ರಾಮದ ಮಣಿಭಾಂಡಕಟ್ಟೆ ರಸ್ತೆಯ, ಕಟ್ಟೆ ಎಂಬಲ್ಲಿ ಭಾರಿ ಮಳೆಯ ಪರಿಣಾಮ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿಯಾಗಿದೆ. ಬಾವಿಯಂತೆ ಆಳವಾದ ಗುಂಡಿ ಸೃಷ್ಟಿಯಾಗಿರುವುದರಿಂದ ವಾಹನ ಸವಾರರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದು, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಳೆಯ ರಭಸಕ್ಕೆ ರಸ್ತೆಯ ಮಣ್ಣು ಕೊಚ್ಚಿಹೋಗಿ ಬಾವಿಯಂತಹ ಆಳವಾದ ಗುಂಡಿ ನಿರ್ಮಾಣಗೊಂಡಿದೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.
ಕಂದಾಯ ಇಲಾಖೆ ಹಾಗೂ ಕೊಂಬಾರು ಗ್ರಾಮ ಪಂಚಾಯಿತಿ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಭಾವ್ಯ ಅಪಾಯ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮಾಹಿತಿ ಸಂಗ್ರಹಿಸಿದ್ದಾರೆ.
ಈ ಮಣಿಭಾಂಡ-ಕಟ್ಟೆ ರಸ್ತೆಯು ಈಗಾಗಲೇ ಸೂಕ್ತ ನಿರ್ವಹಣೆಯಿಲ್ಲದೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಇದೀಗ ಸುರಿದ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹಾನಿಗೊಳಗಾಗಿದ್ದು, ವಾಹನ ಸಂಚಾರ ಸಂಪೂರ್ಣ ಕಷ್ಟಕರವಾಗಿದೆ. ಆದಾಗ್ಯೂ ಪ್ರತಿನಿತ್ಯ ಇದೇ ರಸ್ತೆಯನ್ನು ನೆಚ್ಚಿಕೊಂಡಿರುವ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು, ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆಯ ಆಳವಾದ ಗುಂಡಿ ಕಣ್ಣಿಗೆ ಕಾಣದೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿ ತಕ್ಷಣವೇ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಬೇಕು ಮತ್ತು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net