ಕಡಬದಲ್ಲಿ ಶೀಘ್ರ ಕೋರ್ಟ್ ಕಾರ್ಯಾರಂಭ

ಕಡಬದಲ್ಲಿ ನ್ಯಾಯಾಲಯ ಆರಂಭಿಸಲು ಖಾಸಗಿ ಕಟ್ಟಡದಲ್ಲಿ ತಯಾರಿ ನಡೆಯುತ್ತಿರುವುದು.
ಕಡಬದಲ್ಲಿ ನ್ಯಾಯಾಲಯ ಆರಂಭಿಸಲು ಖಾಸಗಿ ಕಟ್ಟಡದಲ್ಲಿ ತಯಾರಿ ನಡೆಯುತ್ತಿರುವುದು.
Published on
ಪ್ರವೀಣ್‌ರಾಜ್ ಕೊಲ ಕಡಬ
ಕಡಬ: ಕಡಬ ತಾಲೂಕು ರಚನೆಯಾದ ಬಳಿಕ ಒಂದೊಂದೇ ಇಲಾಖೆಗಳು ಕಾಯಾರಂಭ ಮಾಡುವ ಮೂಲಕ ಜನರಿಗೆ ಸರ್ಕಾರಿ ಸೇವೆ, ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದೀಗ ಕಡಬದಲ್ಲಿ ನ್ಯಾಯಾಲಯ ಆರಂಭಿಸಲು ಬಾಡಿಗೆ ಕಟ್ಟಡದಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ.
ಕಡಬ ಪೇಟೆಯಲ್ಲಿ ತಾಲೂಕು ಆಡಳಿತ ಸೌಧದ ಸಮೀಪದಲ್ಲಿರುವ ಸುಂದರ ಗೌಡ ಮಂಡೆಕರ ಮಾಲೀಕತ್ವದ ಕಟ್ಟಡದ ಒಂದು ಮತ್ತು ಎರಡನೇ ಮಹಡಿಯನ್ನು ಬಾಡಿಗೆ ಪಡೆದಿದ್ದು, ನ್ಯಾಯಾಲಯ ಆರಂಭಕ್ಕೆ ತಯಾರಿಗಳು ಬಿರುಸಿನಿಂದ ಸಾಗಿವೆ. ಕಲಾಪ ನಡೆಸಲು ಕೋರ್ಟ್ ಹಾಲ್, ನ್ಯಾಯಾಧೀಶರ ಕೊಠಡಿ, ಕಡತಗಳ ಕೊಠಡಿ, ಎಪಿಪಿ ಕೊಠಡಿ, ಶೌಚಗೃಹ ಮತ್ತಿತರ ಕೆಲಸಗಳು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಉಸ್ತುವಾರಿಯಲ್ಲಿ ನಡೆಯುತ್ತಿವೆ. 3 ತಿಂಗಳೊಳಗೆ ರಾಜ್ಯ ಹೈಕೋರ್ಟ್‌ನಿಂದ ಅನುಮತಿ ಪಡೆದು ತಾಲೂಕು ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಾಲಯದ ಎಲ್ಲ ಕಲಾಪಗಳು ಕಡಬದಲ್ಲಿಯೇ ನಡೆಯುವ ನಿರೀಕ್ಷೆ ಹೊಂದಲಾಗಿದೆ.
ಪುತ್ತೂರು ಅವಲಂಬನೆ: ಪ್ರಸ್ತುತ ಪುತ್ತೂರು ನ್ಯಾಯಾಲಯದಲ್ಲಿ ಕಡಬ ತಾಲೂಕಿಗೆ ಸಂಬಂಧಿಸಿದ ಪ್ರಕರಣಗಳನ್ನು ಪ್ರತ್ಯೇಕ ಕಲಾಪದಲ್ಲಿ ನಡೆಸಲಾಗುತ್ತಿದೆ. ಕಡಬ ತಾಲೂಕಿಗೆ ಸಂಬಂಧಿಸಿದ ಕಲಾಪಗಳು ಕಡಬದಲ್ಲಿಯೇ ನಡೆಯುವಂತಾದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ನೂತನ ಕಟ್ಟಡ ನಿರ್ಮಾಣವಾಗಲು ಕಾಲಾವಕಾಶ ಬೇಕಾಗಿರುವುದರಿಂದ ತಾತ್ಕ್ಕಾಲಿಕ ನೆಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಆರಂಭಗೊಳ್ಳಲಿದೆ.

ಮೂರು ಎಕರೆ ಜಾಗ ಗುರುತು

ಕಡಬದಲ್ಲಿ ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರ ವಸತಿಗೃಹ, ವಕೀಲರ ಭವನ, ಸಿಬ್ಬಂದಿ ವಸತಿಗೃಹ ನಿರ್ಮಾಣಕ್ಕಾಗಿ ಕಡಬ ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ 3 ಎಕರೆ ಜಮೀನು ಕಾಯ್ದಿರಿಸಲಾಗಿದ್ದು, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಕಚೇರಿಗಳಿಗೆ ಹತ್ತಿರದಲ್ಲಿದೆ. ಹೈಕೋರ್ಟ್ ಸೂಚನೆಯಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ಚೀಫ್ ಆರ್ಕಿಟೆಕ್ಟ್‌ಗೆ ಹಸ್ತಾಂತರಿಸಿದ್ದಾರೆ. ಅವರು ನಕ್ಷೆ ತಯಾರಿಸಿ ಪರಿಶೀಲನೆಗಾಗಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕಡಬ ತಾಲೂಕಿನ ಜನರು ನ್ಯಾಯಾಲಯದ ಕಲಾಪಗಳಿಗೆ ಸುಳ್ಯ ಅಥವಾ ಪುತ್ತೂರಿಗೆ ತೆರಳಬೇಕಾಗುವುದನ್ನು ತಪ್ಪಿಸಲು ಕಡಬದಲ್ಲಿ ನ್ಯಾಯಾಲಯ ಸಂಕೀರ್ಣವಾದರೆ ಉತ್ತಮ. ಕಟ್ಟಡ ರಚನೆಯಾಗಲು ಕಾಲಾವಕಾಶ ಬೇಕಾಗಿರುವುದರಿಂದ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಲಿದೆ. ಕಡಬದಲ್ಲಿ ಉಪನೋಂದಣಾಧಿಕಾರಿ ಕಚೇರಿಯನ್ನು ಕೂಡ ತೆರೆಯಬೇಕು.

ಕಡಬದಲ್ಲಿ ನ್ಯಾಯಾಲಯ ಚಟುವಟಿಕೆ ಆರಂಭಿಸುವ ನಿಟ್ಟಿನಲ್ಲಿ ಹೈಕೋರ್ಟ್ ಸೂಚನೆಯಂತೆ ಖಾಸಗಿ ಕಟ್ಟಡದಲ್ಲಿ ಪೂರ್ವಸಿದ್ಧತೆ ಮಾಡಲಾಗುತ್ತಿದೆ. ಕಟ್ಟಡ ಮಾಲೀಕರು ಮತ್ತು ಜಿಲ್ಲಾ ಸತ್ರ ನ್ಯಾಯಲಯದ ಮಧ್ಯೆ ಒಪ್ಪಂದ ಬಳಿಕ ಹೈಕೋರ್ಟ್ ಅನುಮತಿ ಪಡೆದು ಕಲಾಪ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net