ಬಾಂಬ್​ ಬೆದರಿಕೆ ಹಿನ್ನೆಲೆ ನ್ಯಾಯಾಲಯ ಭದ್ರತೆ ಹೆಚ್ಚಳ: ಎಸ್ಪಿ

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​
Published on
ಉಡುಪಿ: ಕಳೆದ ಒಂದು ವಾರದಲ್ಲಿ ಉಡುಪಿಯ ನ್ಯಾಯಾಲಯಗಳಿಗೆ ನಕಲಿ ಬಾಂಬ್​ ಬೆದರಿಕೆಯ ಇಮೇಲ್​ಗಳು ಬಂದಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಕೋರ್ಟ್​ ಆವರಣದಲ್ಲಿ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಹಿಂಭಾಗದ ದ್ವಾರವನ್ನು ಮುಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ತಿಳಿಸಿದ್ದಾರೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೊಂದಿಗೆ ಚರ್ಚಿಸಿ ಭದ್ರತೆಯನ್ನು ಬಲಪಡಿಸಲಾಗಿದೆ. ಪ್ರತಿದಿನ ಮುಂಜಾನೆ ಕೋರ್ಟ್​ ಕಲಾಪಗಳು ಆರಂಭವಾಗುವುದಕ್ಕಿಂತ ಮುಂಚಿತವಾಗಿ 'ಆಂಟಿ-ಸಬೋಟೇಜ್​ ಚೆಕ್​' ತಂಡವು ಇಡೀ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಸ್ಕ್ರೀನಿಂಗ್​ ಮಾಡಲಿದೆ. ಯಾವುದೇ ಶಂಕಾಸ್ಪದ ವಸ್ತುಗಳು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ನ್ಯಾಯಾಲಯಕ್ಕೆ ಇದ್ದ ನಾಲ್ಕು ಪ್ರವೇಶ ದ್ವಾರಗಳ ಪೈಕಿ, ನ್ಯಾಯಾಧೀಶರು ಹಾಗೂ ಸ್ಥಳಿಯ ವಕೀಲರೊಂದಿಗೆ ಸಮಾಲೋಚಿಸಿ ಹಿಂಭಾಗದ ಒಂದು ದ್ವಾರವನ್ನು ಸದ್ಯಕ್ಕೆ ಮುಚ್ಚಲಾಗಿದೆ. ಮುಂಭಾಗದ ಉಳಿದ ಮೂರು ದ್ವಾರಗಳಲ್ಲಿ 'ಮೆಟಲ್​ ಫ್ರೇಮ್​ ಡಿಟೆಕ್ಟರ್​'ಗಳನ್ನು ಅಳವಡಿಸಲಾಗಿದ್ದು, ಶಂಕಾಸ್ಪದವಾಗಿ ಕಂಡುಬರುವ ವ್ಯಕ್ತಿಗಳನ್ನು ಹೆಚ್ಚುವರಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಂತ್ರಿಕ ತನಿಖೆ ಪ್ರಗತಿಯಲ್ಲಿ
ಬಂದಿರುವ ಇಮೇಲ್​ಗಳು ತಾಂತ್ರಿಕವಾಗಿ ಕಳುಹಿಸಿದವರ ಗುರುತನ್ನು ಮರೆಮಾಚಿ ಕಳುಹಿಸಿರುವಂತಹದ್ದಾಗಿದೆ. ಇಂತಹ ಬೆದರಿಕೆ ಇಮೇಲ್​ಗಳು ಕೇವಲ ಉಡುಪಿ ಜಿಲ್ಲೆಯಷೆ್ಟೇ ಅಲ್ಲದೆ ರಾಜ್ಯದ ಇತರೆ ಹಲವು ಜಿಲ್ಲೆಗಳಿಗೂ ಬಂದಿವೆ. ಸದ್ಯಕ್ಕೆ ಮುನ್ನೆಚ್ಚರಿಕೆಯ ಹಿತದೃಷ್ಟಿಯಿಂದ ಈ ತಾತ್ಕಾಲಿಕ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಒಟ್ಟು ಬಂದಿರುವ ನಾಲ್ಕು ಬೆದರಿಕೆ ಇಮೇಲ್​ಗಳ ಪೈಕಿ, ಈಗಾಗಲೇ ಎರಡು ಇಮೇಲ್​ಗಳ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ತಾಂತ್ರಿಕ ತಂಡಗಳ ಸಹಾಯದೊಂದಿಗೆ ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net