ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಸುಗಂಧಿ ಮತ್ತು ಆಕೆಯ ಪತಿ ಸಂತೋಷ್ ಬಂಧಿತ ಆರೋಪಿಗಳು. ಆರೋಪಿತೆ ಸುಗಂಧಿ ಅವರು ಪದ್ಮಕಮಲ ಸಂಜೀವಿನಿ ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ 2023ರಿಂದ 2025ರ ಅವಧಿಯಲ್ಲಿ ವಿವಿಧ ಸಂಘಗಳ ಸದಸ್ಯರು ಪಾವತಿಸಿದ ಸಾಲದ ಮರುಪಾವತಿ ಹಣವನ್ನು ರಿಜಿಸ್ಟರ್ನಲ್ಲಿ ಮಾತ್ರ ನಮೂದಿಸುತ್ತಿದ್ದರು. ಆದರೆ ಆ ಹಣವನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ತಾವೇ ಇಟ್ಟುಕೊಳ್ಳುತ್ತಿದ್ದರು. ಮಾತ್ರವಲ್ಲದೆ ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್ಗಳಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ನಕಲಿ ಸಹಿ ಹಾಕಿ ಬ್ಯಾಂಕ್ನಿಂದ ಹಣ ಡ್ರಾ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಲೆಕ್ಕಪರಿಶೋಧನೆ ವೇಳೆ ಮತ್ತು ಒಕ್ಕೂಟದ ಕಾರ್ಯಕಾರಿ ಸಮಿತಿಗೆ ಯಾವುದೇ ಅನುಮಾನ ಬಾರದಂತೆ, ಸದಸ್ಯರಿಗೆ ತೋರಿಸಲು ಬೇರೆ ಬೇರೆ ನಕಲಿ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಣೆ ಮಾಡುತ್ತಿದ್ದಳು ಎನ್ನಲಾಗಿದೆ.