

ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಅವಿಭಜಿತ ದ.ಕ. ಜಿಲ್ಲೆ ದೇಶದಲ್ಲೇ ಮಾದರಿಯಾಗಿದೆ. ಗ್ರಾಹಕರು ಸಹಕಾರಿ ಕ್ಷೇತ್ರದ ಮೇಲೆ ವಿಶ್ವಾಸ ಹೊಂದಿದ್ದು, ಉಡುಪಿ ಜಿಲ್ಲೆಯ 126 ಕ್ರೆಡಿಟ್ ಕೋ&ಆಪರೇಟಿವ್ ಸೊಸೈಟಿಗಳಲ್ಲಿ 4 ಸಾವಿರ ಕೋಟಿ ರೂ. ಠೇವಣಿ ಇಟ್ಟಿದ್ದಾರೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ , ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಕಾರಿ ಕಾನೂನಿನಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡುತ್ತಿದೆ. ಇದರ ಬಗ್ಗೆ ಸಹಕಾರಿ ಸಂಗಳ ಆಡಳಿತ ಮಂಡಳಿಗೆ ಅರಿವು ಅಗತ್ಯವಾಗಿದೆ. ಸಹಕಾರಿ ಸಂಗಳ ಬೈಲಕ್ಕೆ ಪೂರಕವಾಗಿ ಹೊಸ ನಿಯಮಾವಳಿಗಳನ್ನು ಸೇರ್ಪಡೆ ಮಾಡಿಕೊಂಡು ದಿನನಿತ್ಯದ ವ್ಯವಹಾರಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಪರಿಹರಿಸಿಕೊಳ್ಳಬಹುದು ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಶಿಕುಮಾರ್ ರೈ. ಬಿ. ಉದ್ಘಾಟಿಸಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಸಹಕಾರ ಸಂಘಗಳ ಉಪನಿಬಂಧಕಿ ಕೆ. ಆರ್. ಲಾವಣ್ಯ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಎಂ.ಎಂ. ಆನಂದ್ ಹಾಗೂ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ. ಸುಧೀರ್ ಕುಮಾರ್ ಉಪಸ್ಥಿತರಿದ್ದರು. ಸಹಕಾರ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಸಂಪನ್ಮೂಲವ್ಯಕ್ತಿಗಳಾದ ಬಿ.ವಿ ರವೀಂದ್ರನಾಥ್, ಡಾ. ಗುರುಸ್ವಾಮಿ ಉಪಸ್ಥಿತರಿದ್ದರು. ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಪಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.