ಘಾಟಿ ಪ್ರದೇಶದಲ್ಲಿ 12 ವಿಶೇಷ ತಿರುವುಗಳಿದ್ದು, ಇಲ್ಲಿ ವಾಹನ ಹತ್ತುವಾಗ ಹಾಗೂ ಇಳಿಯುವ ಸಮಯ ಮುಂಭಾಗದಿಂದ ಬರುವ ವಾಹನಗಳು ಪರಸ್ಪರ ಹತ್ತಿರ ಬರುವವರೆಗೂ ಗಮನಕ್ಕೆ ಬರದೆ ಹಲವಾರು ಅಪಘಾತಗಳು ನಡೆಯುತ್ತವೆ. ತಿರುವು ಪ್ರದೇಶಗಳು ಕಿರಿದಾಗಿದ್ದು, ಹೇರ್‌ಪಿನ್ ಕರ್ವ್‌ಗಳಾಗಿರುವ ಕಾರಣ ರಸ್ತೆ ಎಡಬದಿಯಲ್ಲಿ ವಾಹನ ಚಲಾಯಿಸಿಕೊಂಡು ಹೋದರು ಕೆಲವು ಸ್ಥಳಗಳಲ್ಲಿ ವಾಹನ ಬಲಬದಿಗೆ ಚಲಾಯಿಸಿದರೆ ಮಾತ್ರ ತಿರುವು ಪಡೆದುಕೊಳ್ಳಲು ಸಾಧ್ಯವಾಗುವ ಸ್ಥಿತಿ ಇದೆ. ಮುಂಭಾಗದಿಂದ ಬರುವ ವಾಹನಗಳು ಇಂಥ ಸಂದರ್ಭದಲ್ಲಿ ಗೋಚರಕ್ಕೆ ಬರುವುದಿಲ್ಲ. ಲಾರಿ, ಬಸ್‌ನಂಥ ಭಾರಿ ವಾಹನಗಳು ಮುಂಭಾಗದಿಂದ ಬಂದಾಗ ಅಪಾಯ ಕಟ್ಟಿಟ್ಟ ಬುತ್ತಿ.