ಉಡುಪಿ: ಶಿಕ್ಷಣ ಜೀವನ ಬದಲಾಯಿಸುವ ದೊಡ್ಡ ಅಸ್ತ್ರ, ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನಾಯಕತ್ವ ಗುಣವನ್ನು ನೀಡುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ಅಜ್ಜರಕಾಡು ಪುರಭವನದಲ್ಲಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಒಳ್ಳೆಯ ಹುಡುಗಿ ಎನಿಸಿಕೊಳ್ಳುವುದಕ್ಕಿಂತ ಧೈರ್ಯವಂತೆಯಾಗುವುದು ತುಂಬಾ ಮುಖ್ಯ. ಇದರಿಂದ ಮಾತ್ರ ಶೋಷಣೆಯನ್ನು ಪ್ರತಿಭಟಿಸಲು ಸಾಧ್ಯ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಅನೇಕ ವಿಧಗಳಲ್ಲಿ ವಂಚನೆ ನಡೆಯುತ್ತಿದ್ದು, ಈ ಬಗ್ಗೆ ಯುವತಿಯರು ಎಚ್ಚರವಹಿಸಬೇಕು ಎಂದರು.
ತಾಯಿ ಗುಣ ಪ್ರತಿ ಹೆಣ್ಣಿನಲ್ಲಿ ಅಂತರ್ಗತವಾಗಿರುತ್ತದೆ. ಇದಕ್ಕೆ ಪ್ರೋತ್ಸಾಹ ಸಿಗಬೇಕು. ಮಹಿಳೆ ಸಮಾಜಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ಸಭೆಯಲ್ಲಿ ಪ್ರಾಂಶುಪಾಲ ಸೋಜನ್ ಕೆ.ಜಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನುರಾಧಾ ಹಾದಿಮನಿ ಉಪಸ್ಥಿತರಿದ್ದರು. ಡಾ. ನಿಕೇತನ ಸ್ವಾಗತಿಸಿ, ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.
"
ಎಚ್ಪಿವಿ ವ್ಯಾಕ್ಸಿನ್ ನೀಡಲು ಸೂಚನೆ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೆ ಎಚ್ಪಿವಿ ವ್ಯಾಕ್ಸಿನ್ ನೀಡಬೇಕು. ಇದರಿಂದ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ. ಹೀಗಾಗಿ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ 15 ದಿನದೊಳಗೆ ವ್ಯಾಕ್ಸಿನ್ ನೀಡಿ ಈ ಬಗ್ಗೆ ವರದಿಯನ್ನು ಮಹಿಳಾ ಆಯೋಗಕ್ಕೆ ಕಳುಹಿಸಬೇಕು.