ಬಿ.ಸಿ.ರೋಡ್ ನಾರಾಯಣ ಗುರು ವೃತ್ತ ನಿರ್ಮಾಣ

ಬಿ.ಸಿ ರೋಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ನಿರ್ಮಾಣ ಕಾರ್ಯ ನಡೆಯುತ್ತಿರುವುದು.
ಬಿ.ಸಿ ರೋಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ನಿರ್ಮಾಣ ಕಾರ್ಯ ನಡೆಯುತ್ತಿರುವುದು.
Published on
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಬಿ.ಸಿ.ರೋಡಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಇಲ್ಲಿನ ವೃತ್ತವನ್ನು ತೆರವುಗೊಳಿಸಲಾಗಿತ್ತು. ಈಗ ಪ್ರಾಧಿಕಾರದಿಂದ ವೃತ್ತದ ಅಭಿವೃದ್ಧಿ ಕೆಲಸ ಹಂತ-ಹಂತವಾಗಿ ನಡೆಯಲಿದೆ.
ಹೆದ್ದಾರಿ ಸೇರುವ ಮುಖ್ಯ ರಸ್ತೆ ಇದಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಹಾಗೂ ಬಿ.ಸಿ. ರೋಡ್‌ಗೆ ಹೊಸ ಮೆರುಗು ದೊರೆಯುವ ಸ್ವರೂಪದಲ್ಲಿ ವೃತ್ತ ರಚನೆಯಾಗಲಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿದ್ದ ಹಳೆಯ ವೃತ್ತದ ಜಾಗದಲ್ಲಿ ಹೊಸ ವೃತ್ತ ಸಾಕಾರವಾಗಲಿದೆ.
ಪ್ರಾರಂಭದಲ್ಲಿ ಬಲು ವಿಸ್ತಾರದ ವೃತ್ತ ನಿರ್ಮಾಣದ ಉದ್ದೇಶವಿತ್ತು. ಆದರೆ, ಆಗ ಪ್ರಯಾಣಿಕ ವಾಹನಗಳಿಗೆ ಕೊಂಚ ಸಮಸ್ಯೆ ಆಗಬಹುದು ಎಂಬ ಕಾರಣದಿಂದ ವಿಸ್ತಾರ ಕಿರಿದು ಮಾಡಿ ಈಗ 30 ಮೀ.ಗೆ ಸೀಮಿತಗೊಳಿಸಲಾಗಿದೆ.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಪ್ರತಿಕ್ರಿಯಿಸಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸುಂದರ ವೃತ್ತ ಮರು ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ಶೀಘ್ರ ಇದು ಸಾಕಾರವಾಗಲಿದೆ ಎಂದರು.
ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತವನ್ನು ನಾರಾಯಣ ಗುರುಗಳ ಸಂದೇಶದ ಪ್ರಕಾರ ವಿನ್ಯಾಸ ಮಾಡಲಾಗಿದೆ. ಜಾತಿ ಮತದ ಬಗ್ಗೆ ಜನರಿಗೆ ಜ್ಞಾನೋದಯ ಹಾಗೂ ವಿದ್ಯೆಯಿಂದ ಸ್ವತಂತ್ರ ಎಂಬ ಗುರುಗಳ ಆಶಯದಂತೆ ವೃತ್ತ ನೀಲಿನಕ್ಷೆ ರೂಪಿಸಲಾಗಿದೆ. ವಿದ್ಯೆ ಅಂದರೆ ಬೆಳಕು ಎಂಬ ಆಧಾರದಲ್ಲಿ ದೀಪದ ಮಾದರಿ ಇದಕ್ಕಾಗಿ ರೂಪಿಸಲಾಗಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವವನ್ನು ದ್ಯೋತಕವಾಗಿಟ್ಟು ದೀಪವನ್ನು ಮೂರು ಭಾಗಗಳಾಗಿ ರಚಿಸಲಾಗುತ್ತದೆ. ಇದು 16 ಫೀಟ್ ಎತ್ತರವಿರಲಿದೆ. 30 ಮೀ. ವಿಸ್ತೀರ್ಣದಲ್ಲಿ ವೃತ್ತ ರೂಪುಗೊಳ್ಳಲಿದೆ ಎಂದು ವೃತ್ತದ ಡಿಸೈನ್ ಕನ್ಸಲ್ಟೆಂಟ್ ಸುಜಯ್ ಲೋಬೋ ತಿಳಿಸಿದ್ದಾರೆ.

ಹೆದ್ದಾರಿ ಅಭಿವೃದ್ಧಿಗೊಳಿಸುವ ಸಂದರ್ಭ ಬಿ.ಸಿ.ರೋಡ್ ವೃತ್ತ ತೆರವುಗೊಳ್ಳುವ ಕಾಲದಲ್ಲಿ ಶಾಸಕ ರಾಜೇಶ್ ನಾಕ್ ಬಿಲ್ಲವ ಸಂಘದ ಪ್ರಮುಖರ ಜತೆಗೆ ಚರ್ಚಿಸಿದ್ದರು. ಬಳಿಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಈ ನಿಟ್ಟಿನಲ್ಲಿ ಬಿಲ್ಲವ ಸಂಘಕ್ಕೆ ಬಂದು ಎಲ್ಲರ ಅಭಿಪ್ರಾಯ ಪಡೆದು ವೃತ್ತ ನಿರ್ಮಿಸುವ ಬಗ್ಗೆ ಸಮಾಲೋಚನೆಯನ್ನೂ ನಡೆಸಿದ್ದರು. ಇದರಂತೆ ವೃತ್ತ ನಿರ್ಮಾಣ ಆಗುತ್ತಿದೆ.

— ಹರಿಕೃಷ್ಣ ಬಂಟ್ವಾಳ ಬಿಲ್ಲವ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net