ಉಡುಪಿ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ಮಸೂದೆ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡುವ ಮಹತ್ವದ ಮಸೂದೆಯಾಗಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಸಹಿತ ವಿರೋಧಪಕ್ಷಗಳು ವಿರೋಧಿಸಿದ ಕಾರಣದಿಂದ ಸರ್ವಾನುಮತದಿಂದ ಅಂಗೀಕರಿಸುವ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಸುವರ್ಣ ಅವಕಾಶ ತಪ್ಪಿಹೋಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಾಸ್ತವಿಕ ಸ್ಥಿತಿಯನ್ನು ಅರಿತುಕೊಳ್ಳದೆ ವಿರೋಧಿಸುತ್ತಿದೆ. ಈ ಬಾರಿಯ ಜನಗಣತಿಯನ್ನು ಪರಿಗಣಿಸಿದರೆ ಮಹಿಳಾ ಮೀಸಲಾತಿ 2034ರಲ್ಲಿ ಜಾರಿಯಾಗುವ ಸಂಭವವಿದೆ. ಹೀಗಾಗಿ 2011ರ ಜನಗಣತಿ ಪರಿಗಣಿಸಲಾಗಿದೆ. ಪ್ರಸ್ತುತ ದೇಶದಲ್ಲಿ 1973ರಲ್ಲಿ ಜಾರಿಗೆ ಬಂದಿರುವ ಲೋಕಸಭಾ ಸ್ಥಾನಗಳಿದ್ದು, ಅಂದಿನ ಜನಸಂಖ್ಯೆ 55 ಕೋಟಿಯಾಗಿತ್ತು. ಪ್ರಸ್ತುತ ಇದಕ್ಕಿಂತ ಮೂರು ಪಟ್ಟು ಜನಸಂಖ್ಯೆ ಹೆಚ್ಚಾಗಿದ್ದು, ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳ ಅನಿವಾರ್ಯವಾಗಿದೆ ಎಂದರು.
1953ರಲ್ಲಿ 10 ಲಕ್ಷ ಜನಸಂಖ್ಯೆಗೆ ಓರ್ವ ಸಂಸದರಿದ್ದರು. ಈಗ 20 ರಿಂದ 35 ಲಕ್ಷ ಜನಸಂಖ್ಯೆಗೆ ಓರ್ವ ಸದಸ್ಯರಿದ್ದಾರೆ. ಪ್ರತಿ ರಾಜ್ಯಗಳಲ್ಲಿ ಲೋಕಸಭಾ ಸದಸ್ಯರ ಸಂಖ್ಯೆ ಶೇ. 50ರಷ್ಟು ಹೆಚ್ಚಳ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೂ ಕಾಂಗ್ರೆಸ್ ಮನ್ನಣೆ ನೀಡದಿರುವುದು ಖೇದಕರ ಎಂದರು. ಮಸೂದೆ ಜಾರಿಗೆ ಚುನಾವಣೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಮುಂದಿನ ದಿನಗಳಲ್ಲಿ ಈ ಮಸೂದೆ ಜಾರಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಜಿಪಂ ಮಾಜಿ ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಮಹಿಳಾ ಮೋರ್ಚಾ ಮಾಜಿ ಜಿಲ್ಲಾಧ್ಯೆ ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಪ್ರಿಯದರ್ಶಿನಿ, ಅನಿತಾ ಉಪಸ್ಥಿತರಿದ್ದರು.