ನಾರಾಯಣ ಗುರು ನಿಗಮಕ್ಕೆ 500 ಕೋಟಿ ರೂ. ಭರವಸೆ ಹುಸಿ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ.
Published on

* ಬಿಜೆಪಿ ಮುಖಂಡ ವಿಠ್ಠಲ ಪೂಜಾರಿ ಆರೋಪ

 * ಕಾಂಗ್ರೆಸ್​ ಸರ್ಕಾರದಿಂದ ಈಡಿಗ, ಬಿಲ್ಲವರಿಗೆ ವಂಚನೆ

ಉಡುಪಿ: ರಾಜ್ಯ ಕಾಂಗ್ರೆಸ್​ ಸರ್ಕಾರ ಹಿಂದುಳಿದ ವರ್ಗಗಳ ಬಗ್ಗೆ ಬಾಯಿ ಮಾತಿನಲ್ಲಿ ಭರವಸೆ ನೀಡಿದ್ದು ಬಿಟ್ಟರೆ ನಾರಾಯಣ ಗುರು ನಿಗಮಕ್ಕೆ ಕಿಂಚಿತ್ತೂ ಅನುದಾನ ನೀಡುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಾರಾಯಣ ಗುರು ನಿಗಮಕ್ಕೆ ವಾರ್ಷಿಕ 500 ಕೋಟಿ ರೂ. ಕೊಡುವುದಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್​ ಘೋಷಿಸಿತ್ತು. ಇದೀಗ ಆ ಭರವಸೆ ಹುಸಿಯಾಗಿದ್ದು, ಸಮುದಾಯದ ಜನರಿಗೆ ಸರ್ಕಾರ ವಂಚಿಸಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ ಆರೋಪಿಸಿದ್ದಾರೆ.
ಹಿಂದುಳಿದ ವರ್ಗಗಳ ಸಮುದಾಯದ ಅದರಲ್ಲೂ ಕರಾವಳಿ ಮತ್ತು ಮಲೆನಾಡಿನಲ್ಲಿ ಅಪಾರ ಸಂಖ್ಯೆಯಲ್ಲಿರುವ ಬಿಲ್ಲವರು, ಈಡಿಗರು, ನಾಮಧಾರಿಗಳು ಕಾಂಗ್ರೆಸ್​ ನೀಡಿದ್ದ ಭರವಸೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋರಾಟದ ಎಚ್ಚರಿಕೆ

ಪ್ರತಿವರ್ಷ ಬಜೆಟ್​ನಲ್ಲಿ 500 ಕೋಟಿ ರೂ.ನಂತೆ 5 ವರ್ಷದಲ್ಲಿ 2,500 ಕೋಟಿ ರೂ. ನೀಡುವುದಾಗಿ ಕಾಂಗ್ರೆಸ್​ ಪ್ರಕಟಿಸಿತ್ತು. ಆದರೆ, ಇಲ್ಲಿಯವರೆಗೆ ನೀಡಿದ ಭರವಸೆ ಈಡೇರಿಲ್ಲ. ಅದರಿಂದ ನಾರಾಯಣ ಗುರು ನಿಗಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್​ ಅವರು ಈ ಬಗ್ಗೆ ಗಮನ ಹರಿಸಬೇಕು. ಅವರ ಪಕ್ಷ ನೀಡಿದ್ದ ಭರವಸೆಯಂತೆ ನಿಗಮಕ್ಕೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಬಿಲ್ಲವರು, ಈಡಿಗರು, ನಾಮಧಾರಿಗಳು ಒಟ್ಟಾಗಿ ಸೇರಿ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ವಿಠ್ಠಲ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net