ಗೀತಾ ಪಠಣದಿಂದ ಮನಸ್ಸಿನ ಏಕಾಗ್ರತೆ ಸುಲಭ

ಗೀತಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸುಗುಣೇಂದ್ರ ಶ್ರೀ ಬಹುಮಾನ ವಿತರಿಸಿದರು. ಸುಶ್ರೀಂದ್ರ ಶ್ರೀ ಉಪಸ್ಥಿತರಿದ್ದರು.
ಗೀತಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸುಗುಣೇಂದ್ರ ಶ್ರೀ ಬಹುಮಾನ ವಿತರಿಸಿದರು. ಸುಶ್ರೀಂದ್ರ ಶ್ರೀ ಉಪಸ್ಥಿತರಿದ್ದರು.
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ 

ಉಡುಪಿ: ಇಂದಿನ ಮಕ್ಕಳಿಗೆ ಓದಿದ್ದು ತಲೆಗೆ ಹತ್ತುವುದಿಲ್ಲ. ವರ್ಷ ಕಳೆದಂತೆ ಮಕ್ಕಳಲ್ಲಿ ಅವಧಾನ ಶಕ್ತಿ ಕಡಿಮೆಯಾಗುತ್ತಿದೆ. ಪರೀಕ್ಷೆ ಕೇಂದ್ರಕ್ಕೆ ಹೋಗಿ ಪ್ರಶ್ನೆಗೆ ಉತ್ತರ ಬರೆಯುವಾಗ ಓದಿದ್ದೆಲ್ಲ ಮರೆತು ಹೋಗಿರುತ್ತದೆ. ಮನಸ್ಸಿನ ನಿಗ್ರಹವಿಲ್ಲದೆ ಅನಗತ್ಯದ ವಿಚಾರದ ಬಗ್ಗೆ ಹೆಚ್ಚು ಆಸಕ್ತರಾಗುತ್ತಿದ್ದಾರೆ. ವೈರಾಗ್ಯದಿಂದ ಮಾತ್ರ ಏಕಾಗ್ರತೆ ಬರಲು ಸಾಧ್ಯ. ಭಗವದ್ಗೀತೆ ಓದಿದರೆ ಏಕಾಗ್ರತೆ ಸುಲಭವಾಗಿ ಲಭಿಸುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಸೋಮವಾರ (ಡಿ.1) ನಡೆದ ಬೃಹತ್​ ಗೀತೋತ್ಸವ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಗವದ್ಗೀತೆಯ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಆಶೀರ್ವಚನ ನೀಡಿದರು.

ಸಾತ್ವಿಕ ಆಹಾರ ಸೇವಿಸಿ

ಮೊಬೈಲ್​ ಬಂದ ಬಳಿಕವಂತೂ ವಿದ್ಯಾರ್ಥಿಗಳು ಬೇಡದ ವಿಷಯಗಳತ್ತಲೇ ಹೆಚ್ಚು ಆಸಕ್ತಿ ಹೊಂದುತ್ತಿದ್ದಾರೆ. ಅನೇಕ ಮಕ್ಕಳು ಕ್ಲಾಸ್​ನಲ್ಲಿ ಸರಿಯಾಗಿ ಪಾಠ ಕೇಳುವುದಿಲ್ಲ. ಇದಕ್ಕೂ ಸಹ ಏಕಾಗ್ರತೆಯ ಕೊರತೆಯೇ ಕಾರಣ. ಭಗವದ್ಗೀತೆ ಓದಿದರೆ ಏಕಾಗ್ರತೆ ಲಭಿಸಿ ಶಾಲೆಯಲ್ಲಿ ಕಲಿಸಿದ ಪಾಠ ಸುಲಭವಾಗಿ ಅರ್ಥವಾಗುತ್ತದೆ. ಸಾತ್ವಿಕ ಆಹಾರ ಸೇವನೆಯಿಂದಲೂ ಸಹ ಏಕಾಗ್ರತೆ ಲಭಿಸುತ್ತದೆ ಎಂದು ಶ್ರೀಗಳು ತಿಳಿಸಿದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಠದ ವಿದ್ವಾಂಸ ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ, ರವೀಂದ್ರ ಆಚಾರ್​ ಸಹಕರಿಸಿದರು.

240 ಮಕ್ಕಳಿಗೆ ಬಹುಮಾನ ವಿತರಣೆ

ಬೃಹತ್​ ಗೀತೋತ್ಸವದ ನಿಮಿತ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 35 ಶಾಲೆಗಳ 1,600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕ-ಬಾಲಕಿಯರಿಗಾಗಿ 4 ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, 240 ಮಕ್ಕಳು ವಿಜೇತರಾಗಿದ್ದರು. ಶ್ರೀಪಾದದ್ವಯರು ಎಲ್ಲ ಮಕ್ಕಳಿಗೆ ಬಹುಮಾನ ಹಾಗೂ ಶ್ರೀಕೃಷ್ಣನ ಪ್ರಸಾದ ವಿತರಿಸಿ ಶುಭಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net