ಮೇಲ್ದರ್ಜೆಗೇರಲು ಪೈಪೋಟಿ

 ಪಡುಬಿದ್ರಿ ಗ್ರಾಮ ಪಂಚಾಯಿತಿ ಕಾರ್ಯಾಲಯ.
ಪಡುಬಿದ್ರಿ ಗ್ರಾಮ ಪಂಚಾಯಿತಿ ಕಾರ್ಯಾಲಯ.
Published on
ಹೇಮನಾಥ್ ಪಡುಬಿದ್ರಿ
ಡಿಸೆಂಬರ್ ತಿಂಗಳಾಂತ್ಯದಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಳ್ಳಲಿರುವ ಕಾಪು ತಾಲೂಕಿನ ಪಡುಬಿದ್ರಿ ಹಾಗೂ ಶಿರ್ವ ಗ್ರಾಮ ಪಂಚಾಯಿತಿಗಳು ಪ್ರಸ್ತುತ ಜನಸಂಖ್ಯೆಗನುಗುಣವಾಗಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರುವ ಆಶಾಭಾವನೆಯಲ್ಲಿವೆ.
ನಡ್ಸಾಲು ಮತ್ತು ಪಾದೆಬೆಟ್ಟು ಕಂದಾಯ ಗ್ರಾಮಗಳನ್ನೊಳಗೊಂಡ ಪಡುಬಿದ್ರಿ ಗ್ರಾಪಂ 2011ರ ಜನಗಣತಿಯ ಪ್ರಕಾರ 13,476 ಜನಸಂಖ್ಯೆ ಇದ್ದು, 1,062 ಜನ ಸಾಂದ್ರತೆ ಹೊಂದಿದೆ. 2,866 ಕುಟುಂಬಗಳಿವೆ. 13 ವಾರ್ಡ್‌ಗಳಿದ್ದು, 34 ಮಂದಿ ಪಂಚಾಯಿತಿ ಸದಸ್ಯರಿದ್ದಾರೆ.
ಶಿರ್ವ ಗ್ರಾಪಂ 13,396 ಜನಸಂಖ್ಯೆ, 421 ಜನಸಾಂದ್ರತೆ ಹೊಂದ್ದು 3,183 ಕುಟುಂಬಗಳಿವೆ. 32 ಚ.ಕಿ.ಮೀ. ಭೌಗೋಳಿಕ ವಿಸ್ತೀರ್ಣತೆಯ ಶಿರ್ವದಲ್ಲಿ 19 ವಾರ್ಡ್‌ಗಳಿದ್ದು, 34 ಮಂದಿ ಪಂಚಾಯಿತಿ ಸದಸ್ಯರಿದ್ದಾರೆ.

ಒಂದೂವರೆ ದಶಕದ ಹಿಂದೆಯೇ ಪ್ರಸ್ತಾವನೆ

ಈ ಎರಡೂ ಗ್ರಾಪಂಗಳನ್ನು ಒಂದೂವರೆ ದಶಕದ ಹಿಂದೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಅಂದಿನ ಸಚಿವರಾಗಿದ್ದ ದಿ.ವಸಂತ ವಿ.ಸಾಲ್ಯಾನ್ ಮಾಡಿದ್ದರು. ಗ್ರಾಮೀಣ ಕೃಪಾಂಕ ಕೈತಪ್ಪುವ ಕಾರಣವೊಡ್ಡಿ ಅಂದಿನಿಂದಲೂ ಮೇಲ್ದರ್ಜೆಗೇರಲು ಜನ ಹಾಗೂ ಗ್ರಾಮಾಡಳಿತ ಹಿಂದೇಟು ಹಾಕಲಾಗಿತ್ತು. ಈ ಮಧ್ಯೆ ಕಾಪು ಪಡು, ಉಳಿಯಾರಗೋಳಿ, ಮಲ್ಲಾರು 3 ಗ್ರಾಪಂಗಳನ್ನೊಳಗೊಂಡು ಕಾಪು ಪುರಸಭೆಯಾಗಿ ರೂಪುಗೊಂಡಿತು. ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಬೇಕೆಂಬ ನಿರ್ಣಯವನ್ನು ಗ್ರಾಪಂ ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡಿದೆ. ಶಿರ್ವ ಗ್ರಾಪಂನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಗೆಚೆಗೆ ಶಿರ್ವಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಭರವಸೆ ನೀಡಿದ್ದು ಆಶಾಭಾವನೆ ಮೂಡಿಸಿದೆ.

ವೇಗವಾಗಿ ಬೆಳೆಯುತ್ತಿರುವ ಪಡುಬಿದ್ರಿ

ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66, ಕಾರ್ಕಳಕ್ಕೆ ತೆರಳುವ ಪ್ರಮುಖ ರಾಜ್ಯ ಹೆದ್ದಾರಿ ಇದೆ. ವಿಶೇಷ ಆರ್ಥಿಕ ವಲಯ ಸೇರಿದಂತೆ ಹಲವು ಸಣ್ಣ ಕೈಗಾರಿಕೆಗಳ ಸ್ಥಾಪನೆಯೊಂದಿಗೆ ಉದ್ಯೋಗಾವಕಾಶ ಹೆಚ್ಚುತ್ತಿದೆ. ಮುಖ್ಯ ಬೀಚ್ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಫ್ಲ್ಯಾಗ್ ಬೀಚ್‌ಗೆ ಪ್ರತಿನಿತ್ಯ ಪ್ರವಾಸಿಗರು ಭೇಟಿ ನೀಡುತ್ತಿದ್ದು ಪ್ರಮುಖ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ. ಸಮೀಪದ ನಂದಿಕೂರು ಗ್ರಾಮದಲ್ಲಿ ಕೈಗಾರಿಕಾ ಪ್ರದೇಶ, ಎಲ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಅದಾನಿ ಒಡೆತನದ ವಿದ್ಯುತ್ ಸ್ಥಾವರ ಇದೆ. ಆದಾಯದಲ್ಲೂ ಗ್ರಾಪಂ ಮುಂದಿದೆ. ಕೈಗಾರಿಕೆ, ವ್ಯಾಪಾರ ಬೆಳವಣಿಗೆಯಾಗುತ್ತಿದ್ದು, ಕೃಷಿ ಅವಲಂಬಿತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಪಡುಬಿದ್ರಿ ಗ್ರಾಪಂ ನಗರೀಕರಣದ ಹಾದಿಯಲ್ಲಿ ವೇಗವಾಗಿ ಸಾಗುತ್ತಿದ್ದು ಮೇಲ್ದರ್ಜೆಗೇರಿದಲ್ಲಿ ಇನ್ನಷ್ಟು ಅಭಿವೃದ್ಧಿಗೆ ಪೂರಕವಾಗಲಿದೆ.

ಶಿರ್ವ ಗ್ರಾಪಂಗೇ ಕೃಷಿಯೇ ಜೀವಾಳ

ಏಳು ಗ್ರಾಪಂಗಳ ಗಡಿಯನ್ನು ಹೊಂದಿರುವ ಶಿರ್ವ ಗ್ರಾಪಂ ವ್ಯಾಪ್ತಿಯಲ್ಲಿ ಗೇರು ಹಾಗೂ ಸಣ್ಣಪುಟ್ಟ ಕೈಗಾರಿಕೆಗಳು ತಲೆಎತ್ತಿದ್ದರೂ, ಭತ್ತ ಹಾಗೂ ಮಲ್ಲಿಗೆ ಕೃಷಿಯೇ ಪ್ರಧಾನವಾಗಿದೆ. ಅದರೊಂದಿಗೆ ಪರಿವರ್ತಿತ ಜಮೀನುಗಳ ಸಂಖ್ಯೆಯೂ ಕಡಿಮೆ ಪ್ರಮಾಣದಲ್ಲಿವೆ. ಪುರಾತನ ದೇವಳ ಹಾಗೂ ಕೆರೆಗಳ ಅಭಿವೃದ್ಧಿಯಾದಲ್ಲಿ ಪ್ರವಾಸಿ ತಾಣವೂ ಆಗಲಿದೆ. ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ವೇಗ ಸಿಗಲಿದೆ ಎಂಬುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಮೂಲಸೌರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಸಾರ್ವಜನಿಕ ಹಿತದೃಷ್ಟಿಯಿಂದ ಪಡುಬಿದ್ರಿ ಗ್ರಾಪಂನ್ನು ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ತರಬೇಕು ಹಾಗೂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಶಿರ್ವ ಗ್ರಾಪಂ ಮೇಲ್ದರ್ಜೆಗೇರುವುದು ಸ್ವಾಗತಾರ್ಹವೇ ಆಗಿದೆ. ಅದಕ್ಕೆ ಪರ ವಿರೋಧಗಳು ಸಾಮಾನ್ಯ. ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಅಗತ್ಯವಿದೆ. ಮೇಲ್ದರ್ಜೆಗೇರಿದಲ್ಲಿ ಹೆಚ್ಚಿನ ಅನುದಾನದೊಂದಿಗೆ ಪಟ್ಟಣದ ಬೆಳವಣಿಗೆಗೂ ಸಹಕಾರಿಯಾಗಲಿದೆ.

ಮೇಲ್ದರ್ಜೆಗೇರಿಸಲು ಈ ಹಿಂದೆ ನಿರ್ಣಯಗಳನ್ನು ಕೈಗೊಂಡಿರುವುದು ಗಮನಕ್ಕೆ ಬಂದಿದೆ. ಗ್ರಾಪಂನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net