ಮನೆ ಜವಾಬ್ದಾರಿಯೊಂದಿಗೆ ಗಳಿಸಬೇಕು ಪರ್ಯಾಯ ಆದಾಯ

ಉಡುಪಿಯ ಮಲ್ಪೆಯಲ್ಲಿ ಆಯೋಜಿಸಿದ್ದ 'ಸಮುದಾಯ ಪ್ರವಾಸೋದ್ಯಮ ತರಬೇತಿ' ಕಾರ್ಯಕ್ರಮವನ್ನು ಗುರುರಾಜ್​ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಪ್ರತಿಮಾ ಮನೋಹರ್​, ವಿಂಧ್ಯಾ, ಅವಿನಾಶ್​, ಪ್ರಶಾಂತ್​, ಮಹೇಂದ್ರ ಉಪಸ್ಥಿತರಿದ್ದರು.
ಉಡುಪಿಯ ಮಲ್ಪೆಯಲ್ಲಿ ಆಯೋಜಿಸಿದ್ದ 'ಸಮುದಾಯ ಪ್ರವಾಸೋದ್ಯಮ ತರಬೇತಿ' ಕಾರ್ಯಕ್ರಮವನ್ನು ಗುರುರಾಜ್​ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಪ್ರತಿಮಾ ಮನೋಹರ್​, ವಿಂಧ್ಯಾ, ಅವಿನಾಶ್​, ಪ್ರಶಾಂತ್​, ಮಹೇಂದ್ರ ಉಪಸ್ಥಿತರಿದ್ದರು.
Published on

* ಶಾಸಕ ಗುರುರಾಜ್​ ಶೆಟ್ಟಿ ಗಂಟಿಹೊಳೆ ಆಶಯ

* ಬೈಂದೂರು ಮಹಿಳೆಯರಿಗೆ ಪ್ರವಾಸೋದ್ಯಮ ತರಬೇತಿ

ಉಡುಪಿ: ಪ್ರವಾಸೋದ್ಯಮ ಚಟುವಟಿಕೆಗೆ ಬೈಂದೂರು ಅತ್ಯಂತ ಪೂರಕ ವಾತಾವರಣ ಹೊಂದಿದೆ. ಹೀಗಾಗಿ ಬೈಂದೂರನ್ನು ಜಿಲ್ಲೆಯ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿಸಿ ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಚಾರ-&ವಿಚಾರಗಳನ್ನು ದೇಶ-ವಿದೇಶಗಳಿಗೆ ಪರಿಚಯಿಸಬೇಕಿದೆ. ಗ್ರಾಮೀಣ ಮಹಿಳೆಯರು ಮನೆಯ ಜವಾಬ್ದಾರಿಯೊಂದಿಗೆ ಪರ್ಯಾಯ ಆದಾಯದ ಮೂಲ ಕಂಡುಕೊಳ್ಳಬೇಕು. ಆ ದುಡಿಮೆಯ ಲಾಭ ಬೈಂದೂರು ಕ್ಷೇತ್ರದ ಎಲ್ಲ ಮನೆಗಳಿಗೂ ತಲುಪಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಬೈಂದೂರು ಶಾಸಕ ಗುರುರಾಜ್​ ಶೆಟ್ಟಿ ಗಂಟಿಹೊಳೆ ಆಶಯ ವ್ಯಕ್ತಪಡಿಸಿದರು.
ಉಡುಪಿ ಮಲ್ಪೆಯ ಪ್ಯಾರಡೈಸ್​ ಐಲ್​ ಬೀಚ್​ ರೆಸಾರ್ಟ್​ನಲ್ಲಿ ತನ್ನ ಪರಿಕಲ್ಪನೆಯ 'ದುಡ್ಮಿ' (DUDMI- Dignity, Upliftment and Development of women through Micro Initiatives) ಯೋಜನೆಯಡಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಪಂ, ಎನ್​ಆರ್​ಎಲ್​ಎಂ (ಸಂಜೀವಿನಿ)  ಸಹಕಾರದಲ್ಲಿ ಆಯೋಜಿಸಿದ್ದ 'ಸಮುದಾಯ ಪ್ರವಾಸೋದ್ಯಮ ತರಬೇತಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ವಿಷಯಗಳ ತರಬೇತಿ
ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ವಿವಿಧ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಗ್ರಾಮೀಣ ಪ್ರವಾಸೋದ್ಯಮದ ಪ್ರಸ್ತುತ ಅವಕಾಶ, ಅದರಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಯಶಸ್ಸು ಗಳಿಸುವ ವಿಧನಗಳ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಪಂಗಳ ಸಂಜೀವಿನಿ ಒಕ್ಕೂಟಗಳಿಂದ 60ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಪ್ರಯೋಜನ ಪಡೆದರು.
ಮಲ್ಪೆಯ ಪ್ಯಾರಡೈಸ್​ ಐಲ್​ ಬೀಚ್​ ರೆಸಾರ್ಟ್​ನ ಮುಖ್ಯಸ್ಥೆ ಪ್ರತಿಮಾ ಮನೋಹರ್​, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್​, ತಾಲೂಕು ವ್ಯವಸ್ಥಾಪಕ ಪ್ರಶಾಂತ್​ ಹಾಗೂ ವಲಯ ಮೇಲ್ವಿಚಾರಕ ಮಹೇಂದ್ರ ಉಪಸ್ಥಿತರಿದ್ದರು.
"

ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿ ಮಾಡಬೇಕಿದೆ. ಅದರೊಂದಿಗೆ ಸ್ಥಳೀಯ ಸಂಜೀವಿನಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶಾಶ್ವತ ಉದ್ಯೋಗಾವಕಾಶ ಲಭಿಸಬೇಕಿದೆ. ತನ್ಮೂಲಕವಾಗಿ ಆರ್ಥಿಕ ಸಬಲೀಕರಣ ಕಲ್ಪಿಸುವುದು 'ದುಡ್ಮಿ' ಯೋಜನೆಯ ಉದ್ದೇಶ. ಅದಕ್ಕೆಂದೇ ಈ ತರಬೇತಿ ಆಯೋಜಿಸಲಾಗಿದೆ.

— ಗುರುರಾಜ್​ ಶೆಟ್ಟಿ ಗಂಟಿಹೊಳೆ. ಬೈಂದೂರು ಶಾಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net