ಗೃಹ ಬಳಕೆಯ ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಇಲ್ಲ. ಆದರೆ, ತಮಗೆ ಸಿಲಿಂಡರ್ ಸಿಗದಿದ್ದರೆ ಎಂಬ ಕಾರಣಕ್ಕಾಗಿ ನಿಗದಿತ ದಿನಕ್ಕಿಂತ ಮೊದಲೇ ಹೆಚ್ಚಿನ ಗ್ರಾಹಕರು ಬುಕಿಂಗ್ ಮಾಡತೊಡಗಿದ್ದಾರೆ. ಇದರಿಂದ ಏಜೆನ್ಸಿಯವರಿಗೆ ನಿತ್ಯಕ್ಕಿಂತ ಹೆಚ್ಚು ಬಿಲ್ಲಿಂಗ್ ಕಾರ್ಯ ನಿರ್ವಹಿಸುವಂತಾಗಿದ್ದು, ಪೂರೈಕೆಯಲ್ಲೂ 4-5 ದಿನ ವಿಳಂಬ ಆಗುತ್ತಿದೆ. ಗ್ಯಾಸ್ ಬುಕಿಂಗ್ನ ಸರ್ವರ್ ಕೂಡ ಈಗ ಬ್ಯುಸಿಯಾಗಿದ್ದು, ಬೆಳಗ್ಗೆ ಬೇಗ ಅಥವಾ ರಾತ್ರಿ ಅವಧಿಯಲ್ಲಿ ಬುಕಿಂಗ್ ಆಗುತ್ತಿದೆ. ಒಂದೇ ಸಿಲಿಂಡರ್ ಇರುವವರು 25 ದಿನದ ಬಳಿಕ ಹಾಗೂ ಎರಡು ಸಿಲಿಂಡರ್ ಇರುವವರು 30 ದಿನದ ಬಳಿಕವೇ ಬುಕಿಂಗ್ ಮಾಡಬೇಕಿದೆ. ಇದಕ್ಕೂ ಮುನ್ನ ಬುಕ್ ಮಾಡಿದ ಕೆಲವರಿಗೆ ಒಟಿಪಿ ಲಭಿಸಿಲ್ಲ. ಮನೆಗೆ ಸಿಲಿಂಡರ್ ಪೂರೈಕೆ ಮಾಡುವಾಗ ಒಟಿಪಿ ನೀಡುವುದು ಕಡ್ಡಾಯ. ಇಲ್ಲದಿದ್ದಲ್ಲಿ ವಿತರಣೆ ಮಾಡಲಾಗುವುದಿಲ್ಲ ಎಂದು ಉಡುಪಿಯ ಎಚ್ಪಿ ಗ್ಯಾಸ್ನ ಪಾಲುದಾರ ರಾಘವೇಂದ್ರ ಗ್ಯಾಸ್ ಏಜೆನ್ಸಿಯ ಬಾಲಾಜಿ ವಿಷ್ಣು ಆಚಾರ್ಯ ತಿಳಿಸಿದ್ದಾರೆ.