ಹೋಟಲ್ ಉದ್ಯಮಗಳಲ್ಲಿ ಅಡುಗೆ ಅನಿಲಕ್ಕೆ ಪರ್ಯಾಯ ಇಂಧನ ಬಳಕೆಗೆ ಕರೆ

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಸಭೆ ನಡೆಸಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಸಭೆ ನಡೆಸಿದರು.
Published on
ಉಡುಪಿ: ಪಶ್ಚಿಮ ಎಷ್ಯಾ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವುದರಿಂದಾಗಿ ದೇಶದಲ್ಲಿ ವಾಣಿಜ್ಯ ಬಳಕೆ ಮಾಡುವ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಿದೆ. ಇದರಿಂದ ಹೋಟೆಲ್ ಉದ್ಯಮ ನಡೆಸುವವರಿಗೆ ತೊಂದರೆಯಾಗಿದ್ದು ಹೊಟಲ್ ಉದ್ಯಮ ಮುಂದುವರೆಸಲು ಪರ್ಯಾಯ ಇಂಧನ ಕಟ್ಟಿಗೆ ಹಾಗೂ ವಿದ್ಯುತ್ ಉರುವಲು ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಕರೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಸರಬರಾಜು ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿರುವುದಿಲ್ಲ. ಆದರೆ ವಾಣಿಜ್ಯ ಬಳಕೆಯ ಅನಿಲ ಹೊರ ದೇಶಗಳಿಂದ ಪೂರ್ಣ ಪ್ರಮಾಣದಲ್ಲಿ ಆಮದು ಆಗುತ್ತಿದ್ದು, ಯುದ್ಧದಿಂದಾಗಿ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದು ತಾತ್ಕಾಲಿಕ ಸಮಸ್ಯೆ ಆಗಿದೆ. ಇದಕ್ಕೆ ಪರ್ಯಾಯ ಉರುವಲುಗಳ ಬಳಕೆಯೊಂದೇ ಮಾರ್ಗ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಕೆಲವು ಹೋಟೆಲ್ ಉದ್ಯಮಗಳು ಕಟ್ಟಿಗೆ ಸೇರಿದಂತೆ ಮತ್ತಿತರ ಉರುವಲುಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಹೋಟೆಲ್ ಉದ್ಯಮಗಳು ಇದಕ್ಕೆ ಒತ್ತು ನೀಡುವುದರೊಂದಿಗೆ ಹೋಟೆಲ್ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗವಕಾಶವನ್ನು ಮುಂದುವರೆಸುವುದು ಉತ್ತಮ ಎಂದರು.
ಜಿಲ್ಲೆಯಲ್ಲಿ 25000 ದಿಂದ 30000 ಕ್ಕೂ ಹೆಚ್ಚು ಜನರು ಹೋಟೆಲ್ ಉದ್ಯಮದ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚು ಜನರು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸಿದ್ದಾರೆ. ಉದ್ಯಮದಲ್ಲಿ ವ್ಯತ್ಯಯ ಉಂಟಾಗಿ ಕಾರ್ಮಿಕರು ನಿರುದ್ಯೋಗಿಗಳಾಗಿ ಬೇರೆ ಉದ್ಯೋಗ ಅರಸಿ ಹೋದರೆ ಮುಂಬರುವ ದಿನಗಳಲ್ಲಿ ಹೋಟೆಲ್ ಗಳಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗುತ್ತದೆ ಎಂದರು.
ಜಿಲ್ಲೆಯಲ್ಲಿ 80 ಕ್ಕೂ ಹೆಚ್ಚು ಸಾಮಿಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಹೋಟೆಲ್ ಉದ್ಯಮಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಟ್ಟಿಗೆ ಲಭ್ಯವಾಗುವಂತೆ ಸಹಕರಿಸಬೇಕು. ಹೋಟೆಲ್ ಉದ್ಯಮಿಗಳು ತಮ್ಮ ದೈನಂದಿನ ಚಟುವಟಿಕೆಗೆ ವಿದ್ಯುತ್ ಸ್ಟವ್‌ಗಳ ಬಳಕೆಗೆ ಮುಂದಾದರೆ ಅಗತ್ಯ ಸಹಕಾರ ನೀಡಬೇಕು ಎಂದು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net