ಶುದ್ಧಗಂಗಾ ಘಟಕ ದುಸ್ಥಿತಿ ವರದಿಗೆ ಸಿಎಂ ಕಚೇರಿ ಸ್ಪಂದನೆ

ವಿಜಯವಾಣಿಯಲ್ಲಿ ಆ.21ರ ಸಂಚಿಕೆಯಲ್ಲಿ ಪ್ರಕಟಗೊಂಡ ವರದಿ
ವಿಜಯವಾಣಿಯಲ್ಲಿ ಆ.21ರ ಸಂಚಿಕೆಯಲ್ಲಿ ಪ್ರಕಟಗೊಂಡ ವರದಿ
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿರುವ ಬಗ್ಗೆ ವಿಜಯವಾಣಿ ಪತ್ರಿಕೆಯ ಆಗಸ್ಟ್ 21ರ ಸಂಚಿಕೆಯಲ್ಲಿ ಪ್ರಕಟಗೊಂಡ ವರದಿಯನ್ನಾಧರಿಸಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಉಳ್ಳಾಲ ಕ್ಷೇತ್ರದಲ್ಲಿ ಪಾವೂರು, ಮುಡಿಪು, ಅಂಬ್ಲಮೊಗರು, ಕಿನ್ಯಾ, ಕೋಟೆಕಾರ್, ಸೋಮೇಶ್ವರ, ಮುನ್ನೂರು, ಇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ಥಾಪಿಸಲಾದ ಘಟಕ ಪ್ರಸ್ತುತ ಪಾಳುಬಿದ್ದಿದೆ. ಅಂಬ್ಲಮೊಗರುವಿನ ಘಟಕದೊಳಗಿನ ವಸ್ತುಗಳು ಮಾತ್ರವಲ್ಲದೆ ಬಾಗಿಲುಗಳೂ ನಾಪತ್ತೆಯಾಗಿದೆ. ಕಲ್ಲಾಪುವಿನಲ್ಲಿ ಸಾರ್ವಜನಿಕರಿಗೆ ಆಶ್ರಯತಾಣವಾಗಿದೆ. ಉಳ್ಳಾಲದಲ್ಲಿ ಆರಂಭಗೊಂಡಿದ್ದ ವಾಟರ್ ಕಿಯೋಸ್ಕ್ ಕೂಡಾ ಪಾಳುಬಿದ್ದಿರುವ ಬಗ್ಗೆ ವಿಜಯವಾಣಿಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು.

ಉಪವಿಭಾಗದಿಂದ ಸರ್ಕಾರಕ್ಕೆ ಉತ್ತರ


ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರಕ್ಕೆ ಸಂಬಂಧಿಸಿ ಮಂಗಳೂರು ಉಪವಿಭಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉತ್ತರ ನೀಡಿದ್ದಾರೆ.
ಮದಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆಆರ್‌ಐಡಿಎಲ್ ಇಲಾಖೆಯವರು ಅನುಷ್ಠಾನಗೊಳಿಸಿದ್ದು, ಪ್ಯಾನೆಲ್ ಬೋರ್ಡ್, ನೀರಿನ ಪಂಪ್ ಸಹಿತ ಇತರ ಪರಿಕರ ಇಲ್ಲದೆ ಘಟಕ ಕಾರ್ಯನಿರ್ವಹಿಸದ ಕಾರಣ ಇವುಗಳನ್ನು ಅಳವಡಿಸುವಂತೆ ಮಂಗಳೂರು ಉಪವಿಭಾಗಕ್ಕೆ 2020ರ, ಮಾರ್ಚ್ 18ರಂದು ಹಸ್ತಾಂತರಿಸಿದ್ದಾರೆ.
ಪರಿಕರ ಅಳವಡಿಸದ ಕಾರಣ ಶುದ್ಧ ಕುಡಿಯುವ ನೀರಿನ ಘಟಕವು ಕಾರ್ಯನಿರ್ವಹಿಸದೆ ಉಪಯೋಗವಾಗದೆ ಪಾಳುಬಿದ್ದಿರುತ್ತದೆ. ಈ ಘಟಕ ದುರ್ವ್ಯಸನಿಗಳ ಅಡ್ಡೆಯಾಗಿದೆ. ಹತ್ತಿರದಲ್ಲಿ ಶಾಲೆಯಿದ್ದು ಮಹಿಳೆಯರು ಹಾಗೂ ಮಕ್ಕಳಿಗೆ ಮುಸ್ಸಂಜೆ ವೇಳೆಯಲ್ಲಿ ಸಮಸ್ಯೆಗಳು ಎದುರಾಗಿದ್ದು ಘಟಕ ನಾದುರಸ್ತಿಯಲ್ಲಿರುವುದರಿಂದ ಕೂಡಲೇ ತೆರವುಗೊಳಿಸುವಂತೆ ಅಂಗ್ಲಮೊಗರು ಪಿಡಿಒ ಮನವಿ ಮಾಡಿದ್ದಾರೆ.
ಇದು ಮೂಲ ಘಟಕವಾದುದರಿಂದ ಯಾವುದೇ ರೀತಿಯಲ್ಲಿ ತೆರವುಗೊಳಿಸಲು ಸಾಧ್ಯವಿಲ್ಲವೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದ್ದಾರೆ. ಘಟಕವನ್ನು ಬೇರೊಂದು ಜಾಗಕ್ಕೆ ಸ್ಥಳಾಂತರಿಸಿರೆ ಸದುಪಯೋಗವಾಗಬಹುದೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗೂ ಸಾರ್ವಜನಿಕರು ಸಲಹೆ ನೀಡಿದ ಮೇರೆಗೆ ಘಟಕವನ್ನು ಅದೇ ಗ್ರಾಮದ ಎಲ್ಯಾರ್‌ಪದವು ಎಂಬಲ್ಲಿನ ಸರ್ಕಾರಿ ಜಮೀನಿನಲ್ಲಿ ಸ್ಥಳಾಂತರಿಸಲು ಗುತ್ತಿಗೆದಾರರು ಸರ್ವೇ ಮಾಡಿ ಮೊತ್ತ 4.65 ಲಕ್ಷ ರೂ. ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಿದ್ದಾರೆ.
ಮುನ್ನೂರು ಹಾಗೂ ಪಾವೂರಿನಲ್ಲಿರುವ ಘಟಕಗಳನ್ನು ಪರಿಶೀಲಿಸಲಾಗಿದ್ದು ಉತ್ತಮ ಸ್ಥಿತಿಯಲ್ಲಿವೆ. ಕಲ್ಲಾಪುವಿನಲ್ಲಿದ್ದ ಘಟಕ ಈ ಉಪವಿಭಾಗ ವ್ಯಾಪ್ತಿಗೆ ಬರುವುದಿಲ್ಲವೆಂದು ಉತ್ತರ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net