ಬೀದಿನಾಯಿಗೆ ನಗರಸಭೆ ವಾಹನ ಡಿಕ್ಕಿ, 30 ಸಾವಿರ ರೂ. ಚಿಕಿತ್ಸಾ ವೆಚ್ಚ ಭರಿಸಲು ನೋಟಿಸ್​

ಉಡುಪಿ ನಗರಸಭೆ
ಉಡುಪಿ ನಗರಸಭೆ
Published on
ಉಡುಪಿ: ಕುಂಜಿಬೆಟ್ಟು ಪ್ರದೇಶದಲ್ಲಿ ಉಡುಪಿ ನಗರಸಭೆಗೆ ಸೇರಿದ ಅಧಿಕೃತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೀದಿ ನಾಯಿ ಗಂಭೀರಗಾಯಗೊಂಡಿದ್ದು, ಪ್ರಾಣಿಗೆ ಚಿಕಿತ್ಸೆ ನೀಡದೆ ಚಾಲಕ ನಿರ್ಗಮಿಸಿದ ಕಾರಣ ಮೋಟಾರು ವಾಹನ ಕಾಯ್ದೆ 1988 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಬಬಿತಾ ರಾಜ್​ ನಗರಸಭೆಯ ಆಯುಕ್ತರಿಗೆ ಕಾನೂನು ನೋಟಿಸ್​ ಸಲ್ಲಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ನರಳುತ್ತಿದ್ದ ನಾಯಿಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ರಾಣಿ ರಕ್ಷಣಾ ತಂಡ ನಾಯಿಯನ್ನು ತುರ್ತು ಚಿಕಿತ್ಸೆಗೆ ದಾಖಲಿಸಿದೆ. ಅಪಘಾತದಿಂದಾಗಿ ನಾಯಿಯ ನಾಲ್ಕು ಕಡೆ ಮೂಳೆ ಮುರಿತ , ಬಾಲದ ಮೂಳೆ ತೀವ್ರವಾಗಿ ಜಖಂಗೊಂಡಿರುವುದರಿಂದ ಬಾಲವನ್ನು ಕತ್ತರಿಸಿ ತೆಗೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಅತಿಯಾದ ರಕ್ತಸ್ರಾವವಾಗಿರುವುದರಿಂದ ನಾಯಿಗೆ ರಕ್ತ ವರ್ಗಾವಣೆ ಕೂಡ ಮಾಡಲಾಗಿದೆ.ಗಾಯಗೊಂಡ ನಾಯಿಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಔಷಧೋಪಚಾರ, ರಕ್ತ ವರ್ಗಾವಣೆ, ಪುನರ್ವಸತಿ ಹಾಗೂ ಮುಂದಿನ 2 ರಿಂದ 3 ತಿಂಗಳ ಪೋಸ್ಟರ್​ ಕೇರ್​ಗಾಗಿ ಸುಮಾರು 30 ಸಾವಿರ ರೂ. ವೆಚ್ಚ ತಗಲಲಿದ್ದು, ಈ ಸಂಪೂರ್ಣ ಮೊತ್ತವನ್ನು ನಗರಸಭೆಯೇ ಭರಿಸಬೇಕೆಂದು ಒತ್ತಾಯಿಸಲಾಗಿದೆ. ಇನ್ನು 7 ದಿನಗಳ ಒಳಗಾಗಿ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net