ಕ್ಲೀನ್​ ಇಂದ್ರಾಣಿ ಯೋಜನೆಗೆ ಡ್ರೋನ್​ ಸರ್ವೆ: ಜಿಲ್ಲಾಧಿಕಾರಿ

 ನಗರಸಭೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.  ಮಾತನಾಡಿದರು.
ನಗರಸಭೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿದರು.
Published on
ಉಡುಪಿ: ಇಂದ್ರಾಳಿ ನದಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ಲೀನ್​ ಇಂದ್ರಾಣಿ ಯೋಜನೆ ರೂಪುರೇಶೆ ಸಿದ್ಧಪಡಿಸಲಾಗಿದ್ದು, ನದಿ ಹರಿದು ಹೋಗುವ ಪ್ರದೇಶದಲ್ಲಿ ಪೂರ್ತಿ ಡ್ರೋನ್​ ಸರ್ವೆ ನಡೆಸಲಾಗುತ್ತಿದೆ. ಕಲುಷಿತ ನೀರುಗಳು ನದಿಗೆ ಸೇರುವ ಬಗ್ಗೆ ವರದಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು. 

ಶುಕ್ರವಾರ ನಗರಸಭೆ ಸಭಾಂಗಣದಲ್ಲಿ  ನಡೆದ ಮಳೆಗಾಲದ ಪೂರ್ವ ಸಿದ್ಧತೆಗಳ ಬಗ್ಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಬೇರೆ ಪ್ರದೇಶಗಳಿಂದ ಮಲ ತ್ಯಾಜ್ಯವನ್ನು ತಂದು ನದಿಗೆ ಸುರಿಯಲಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ನಗರಸಭಾ ವ್ಯಾಪ್ತಿ ಬಿಟ್ಟು ಬೇರೆ ಪ್ರದೇಶಗಳಿಂದ ಮಲತ್ಯಾಜ್ಯ ತರದಂತೆ ಸೂಚನೆ ನೀಡಲಾಗುವುದು ಎಂದರು. 
ಶಾಸಕ ಯಶ್​ ಪಾಲ್​ ಸುವರ್ಣ ಮಾತನಾಡಿ, ನಗರದಲ್ಲಿ ನಿರಂತರ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ಕೃತಕ ನೆರೆ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ರಾಜ ಕಾಲುವೆಗಳ ಹೂಳು ಹಾಗೂ ಅಪಾಯಕಾರಿ ಮರಗಳ ಗೆಲ್ಲುಗಳ ತೆರವು ಮಾಡಬೇಕು. ಮಳೆಗಾಲ ಆರಂಭವಾಗುವ ಮುನ್ನ ಬಾಕಿಯಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸಲು ವಿಶೇಷ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ನಿಕಟಪೂರ್ವ ನಗರಸಭಾ ಸದಸ್ಯರಿಗೆ ಅಧಿಕಾರಿಗಳು ಮಾಹಿತಿ ಕೊಡಬೇಕು ಎಂದರು. 

ನಗರದಲ್ಲಿ 58 ಅಧಿಕೃತ  ರಿಕ್ಷಾ  ನಿಲ್ದಾಣಗಳಿದ್ದು, ನಗರ ವ್ಯಾಪ್ತಿಯ ಚಾಲಕರಿಗೆ ಮಾತ್ರ ಅವಕಾಶ ನೀಡಬೇಕು. ಕೆಲವು ರಿಾ ಚಾಲಕರು ಇತ್ತೀಚೆಗೆ ನಗರದಲ್ಲಿ ಮನೆ ಮಾಡಿ ಅಧಾರ್​ ಕಾರ್ಡ್​ ಮತ್ತು ರೇಶನ್​ ಕಾರ್ಡ್​ ಮಾಡಿಕೊಂಡಿದ್ದಾರೆ. ಅನುಮತಿ ನೀಡುವ ಮುನ್ನ ಎಷ್ಟು ವರ್ಷದಿಂದ ಇಲ್ಲಿ ವಾಸವಾಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ನಗರ ನಿವಾಸಿಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದರು. 
ಪೌರಾಯುಕ್ತ ಮಹಂತೇಶ್​ ಮಾತನಾಡಿ, ಮಳೆಗಾಲದ ಸಿದ್ಧತೆಗಾಗಿ 40 ಮಂದಿ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬನ್ನಂಜೆ, ಕಿನ್ನಿಮುಲ್ಕಿ ನೆರೆ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸಣ್ಣ ತೋಡುಗಳಲ್ಲಿ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಕಲ್ಮಾಡಿ ಹೊಳೆಯಲ್ಲಿ ಹೂಳು ತೆಗೆಯಲು ಬೇಡಿಕೆಗಳು ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಸರ್ಕಾರದಿಂದ 4 ಕೋಟಿ ರೂ. ಅನುದಾನ ಬಂದಿದ್ದು, 3.44 ಕೋಟಿ ರೂ. ವೆಚ್ಚದಲ್ಲಿ ಸಿವಿಲ್​ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. 
ನೀರಿನ ಸಮಸ್ಯೆ ಸದ್ಯಕ್ಕಿಲ್ಲ
ಬಜೆಯಲ್ಲಿ ಪ್ರಸ್ತುತ 3.9 ಮೀ ನೀರು ಸಂಗ್ರಹವಾಗಿದ್ದು, ಮೇ ಅಂತ್ಯದವರೆಗೆ ನೀರು ಕೊಡಬಹುದು. ವಾರಾಹಿಯಿಂದ ಪ್ರತಿ ದಿನ 38 ಎಂಎಲ್​ಡಿ ನೀರು ಬರುತ್ತಿದೆ. ಇದರಿಂದ ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ ಎಂದರು. 
ವಾರಾಹಿ ಇಂಜಿನಿಯರ್​ ಸುದೀಪ್​ ಮಾತನಾಡಿ, ನೀರಿನ ರಭಸಕ್ಕೆ ಕೆಲವೆಡೆ ಹಳೆ ಪೈಪ್​ಗಳು ಒಡೆದು ಹೋಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಹೊಸ ಪೈಪ್​ಲೈನ್​ ಅಳವಡಿಕೆ ಮಾಡಲಾಗಿದೆ. ಇಂಥ ಸಮಸ್ಯೆ ಇರುವ 3-4 ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು. 
ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಗಿರೀಶ್​ ಅಂಚನ್​, ಸುಂದರ ಕಲ್ಮಾಡಿ, ವಿಜಯ ಕೊಡವೂರು, ರಮೇಶ್​ ಕಾಂಚನ್​ ಮೊದಲಾದವರು ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net