ಕೊಲ್ಲೂರು ಮೂಕಾಂಬಿಕೆಗೆ ಸಿಎಂ ವಿಜಯ್​ ಬೆಳ್ಳಿ ಖಡ್ಗ ಸಮರ್ಪಣೆ

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವತಃ ಕಾರು ಚಲಾಯಿಸಿ ಮಂಗಳೂರಿಗೆ
  • 1.600 ಕೆ.ಜಿ. ತೂಕದ ಬೆಳ್ಳಿ ಖಡ್ಗ ಸಮರ್ಪಣೆ
  • ತಮಿಳುನಾಡು-ಕೊಲ್ಲೂರು ಬಸ್​ ಆರಂಭಕ್ಕೆ ಮನವಿ
  • ದೇವರ ಫೋಟೋ ಸ್ವೀಕರಿಸಿದ ಸಿಎಂ
ವಿಜಯವಾಣಿ ಸುದ್ದಿಜಾಲ ಬೈಂದೂರು
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ಸಾಂಪ್ರದಾಯಕ ಉಡುಗೆಯಲ್ಲಿ ದೇವಳದ ಮುಂಭಾಗದ ಧ್ವಜಗಂಬಕ್ಕೆ ನಮಿಸಿ, ದೇವರ ದರ್ಶನ ಪಡೆದು ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿದರು.
ದೇವಳದ ತಂತ್ರಿ, ಪ್ರಧಾನ ಅರ್ಚಕ ಡಾ.ರಾಮಚಂದ್ರ ಅಡಿಗ ಅರ್ಕಳಾ ಸ್ತೋತ್ರಂ ಪಠಿಸುತ್ತಾ ಸಿಎಂ ವಿಜಯ್​ಗೆ ರಾದಾರ ಕಟ್ಟಿದರು. ಬಳಿಕ ಸಿಎಂ ಅವರು 1.600 ಕೆ.ಜಿ. ತೂಕದ ಬೆಳ್ಳಿಯ ಖಡ್ಗವನ್ನು ಶ್ರೀ ಮೂಕಾಂಬಿಕಾ ಅಮ್ಮನವರಿಗೆ ಅರ್ಪಿಸಿದರು.
ಸಿಎಂ ವಿಜಯ್​ ಅವರಿಗೆ ದೇವಳದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇವಳದ ಸಿಇಒ ಪ್ರಶಾಂತ್ ​ಕುಮಾರ್​ ಶೆಟ್ಟಿ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಸಿಎಂ ಅವರನ್ನು ಗೌರವಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ ಸಹನಾ, ಯು.ರಾಜೇಶ ಕಾರಂತ್​, ಅಭಿಲಾಷ್​ ಪಿ.ವಿ., ಧನಾಕ್ಷಿ ವಿಶ್ವನಾಥ, ಸುಧಾ ಕೆ., ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ದೇವರ ಫೋಟೋ ಸ್ವೀಕರಿಸಿದ ಸಿಎಂ
ಕೊಲ್ಲೂರು ದೇವಳ ವತಿಯಿಂದ ಸಿಎಂ ವಿಜಯ್​ ಅವರನ್ನು ಗೌರವಿಸಲು ಸಕಲ ಸಿದ್ಧತೆ ನಡೆಸಲಾಗಿತ್ತು. ಈ ಸಂದರ್ಭ ಸನ್ಮಾನ ನಿರಾಕರಿಸಿದ ವಿಜಯ್​, ಶ್ರೀ ಮೂಕಾಂಬಿಕೆಯ ಫೋಟೋ ಮಾತ್ರ ನೀಡುವಂತೆ ಕೇಳಿದರು. ಹಾರ, ಶಾಲುಗಳನ್ನು ನಿರಾಕರಿಸಿ ದೇವಿಯ ಫೋಟೋ ಮಾತ್ರ ಸ್ವೀಕರಿಸಿದರು.
ಸ್ವತಃ ಕಾರು ಚಲಾಯಿಸಿ ಮಂಗಳೂರಿಗೆ
ಇಪ್ಪತ್ತು ನಿಮಿಷ ದೇವರ ದರ್ಶನ ಪಡೆದು ಹೊರಬಂದ ಸಿಎಂ ವಿಜಯ್​, ಸ್ವತಃ ತಾವೇ ಕಾರನ್ನು ಚಲಾಯಿಸಿಕೊಂಡು ಮಂಗಳೂರು ಏರ್​ಪೋರ್ಟ್​ನತ್ತ ತೆರಳಿದರು. ಕೊಲ್ಲೂರು ಪೇಟೆಯ ಇಕ್ಕೆಲಗಳಲ್ಲಿ ನೂರಾರು ಸಂಖ್ಯೆಯಲ್ಲಿ ವಿಜಯ್​ ಅಭಿಮಾನಿಗಳು ಸೇರಿದ್ದರು.
ಬಸ್​ ಆರಂಭಕ್ಕೆ ಮನವಿ
ಈ ಮೊದಲು ಸೇಲಂ, ಕೊಯಂಬತ್ತೂರ್​ ಹಾಗೂ ಚೆನ್ನೆನಿಂದ ಕೊಲ್ಲೂರಿಗೆ ತಮಿಳುನಾಡು ಸರ್ಕಾರಿ ಬಸ್​ಗಳ ವ್ಯವಸ್ಥೆಯಿತ್ತು. ತಮಿಳುನಾಡು ಭಕ್ತರ ಅನುಕೂಲಕ್ಕಾಗಿ ಈ ಬಸ್​ಗಳ ಸೇವೆಯನ್ನು ಪುನರಾರಂಭಿಸುವಂತೆ ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಮನವಿ ಮಾಡಿದರು. ಸ್ಪಂದಿಸಿದ ಸಿಎಂ ವಿಜಯ್, ಈ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net