ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ 'ಭ್ರಮೆ' ಸೃಷ್ಟಿಸಿದ ಸಿಎಂ ಡಿಕೆಶಿ

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು. ಉಡುಪಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಇದ್ದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು. ಉಡುಪಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಇದ್ದರು.
Published on: 

* ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕೆ

* ಜನರ ಭಾವನೆ, ಜೀವನದೊಂದಿಗೆ ಚಲ್ಲಾಟ ಆಡದಿರಲು ಸಲಹೆ

ಉಡುಪಿ: ಕರಾವಳಿ ಜಿಲ್ಲೆಯ ಅಭಿವೃದ್ಧಿಗಾಗಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು 36 ಸಾವಿರ ಕೋಟಿ ರೂ. ಘೋಷಿಸಿ ಈ ಭಾಗದಲ್ಲಿ ಏನೋ ಭಾರಿ ಅಭಿವೃದ್ಧಿ ಆಗಿಬಿಡುತ್ತದೆ ಎಂಬ ಭ್ರಮೆ ಸೃಷ್ಟಿಸಿದ್ದರು. ಆದರೆ, ಕ್ಯಾಬಿನೆಟ್​ ಸಭೆ ನಡೆದ ಒಂದೇ ವಾರದಲ್ಲಿ ಹಣಕಾಸು ಇಲಾಖೆಯು ಆರ್ಥಿಕ ಕೊರತೆ ಇರುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದು ರಾಜ್ಯ ಯಾವ ಮಟ್ಟದಲ್ಲಿ ದಿವಾಳಿ ಆಗಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಕೆನರಾ (ಉತ್ತರ ಕನ್ನಡ) ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.

ಉಡುಪಿಯಲ್ಲಿ ಶನಿವಾರ (ಸೆ.26) ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಅಭಿವೃದ್ಧಿ ಕಾರ್ಯ ಮಾಡಲೂ ಸಹ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಸರ್ಕಾರದಿಂದ ಹಣಕಾಸಿನ ನೆರವು ಇಲ್ಲದೆ ಬೆಳಗಾವಿಯಲ್ಲಿ ಅಧಿಕಾರಿಯೊಬ್ಬರು ಆತ್ಮಹತ್ಯೆಯ ಪತ್ರ ಬರೆದು ನಾಪತ್ತೆಯಾಗಿದ್ದಾರೆ. ಸರ್ಕಾರದ ಆಡಳಿತ ಎತ್ತ ಸಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲು ಗ್ಯಾರಂಟಿ ಸರಿಯಾಗಿ ನೀಡಿ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯ ಜನತೆಗೆ ಭ್ರಮನಿರಸ ಆಗಿತ್ತು. ಇದೀಗ ಡಿಕೆಶಿ ಸಿಎಂ ಆದ ಬಳಿಕ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಜನತೆಯನ್ನು ಭ್ರಮೆಯಲ್ಲಿ ಇರುವಂತೆ ಮಾಡುತ್ತಿದ್ದಾರೆ. ಇದು ಕೃತಕವಾದ ಭ್ರಮೆಯಾಗಿದೆ. ಇವರ ಪಂಚ ಗ್ಯಾರಂಟಿಗಳಿಗೆ ಸರಿಯಾಗಿ ಅನುದಾನ ಕೊಡಲು ಆಗುತ್ತಿಲ್ಲ. ಅದರೂ ಜನರಿಗೆ ತಾವೇನೋ ಮಾಡುತ್ತೇವೆ ಎಂದು ತೋರ್ಪಡಿಸಲು ಸಾವಿರಾರು ಕೋಟಿ ರೂ.ಗಳ ಮಾತನಾಡುತ್ತಿದ್ದಾರೆ. ಕಾಮಗಾರಿಗಳ ಹಣವೂ ನೀಡುತ್ತಿಲ್ಲ. ಸಾರಿಗೆ ನೌಕರರಿಗೆ ವೇತನ ಕೊಡಲೂ ಹಣವಿಲ್ಲ ಎಂದು ಅವರ ಸಚಿವರೇ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮೊದಲು ನಿಮ್ಮ ಗ್ಯಾರಂಟಿ ಯೋಜನೆಗೆ ಸರಿಯಾಗಿ ಹಣ ಬಿಡುಗಡೆ ಮಾಡಿ ಎಂದರು.

ಸ್ವಾರ್ಥಕ್ಕಾಗಿ ಕರಾವಳಿ ಕನವರಿಕೆ

ಕರಾವಳಿಯಲ್ಲಿ ತಮ್ಮ ಸ್ವಾರ್ಥದ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕರಾವಳಿ ಕರಾವಳಿ ಎಂದು ಕನವರಿಕೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ ಎಂದು ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಭಾಗದಲ್ಲಿ ತಾವು ಹೂಡಿಕೆ ಮಾಡಿ ಅವರ ಅಭಿವೃದ್ಧಿಯ ಯೋಜನೆ ಇದಾಗಿದೆ ಎಂದು ಜನರೂ ಹೇಳತೊಡಗಿದ್ದಾರೆ. ಹೀಗಾಗಿ ನಿಮ್ಮ ಸ್ವಾರ್ಥಕ್ಕಾಗಿ ಜನರ ಭಾವನೆ, ಜೀವನದೊಂದಿಗೆ ಚಲ್ಲಾಟ ಮಾಡಬೇಡಿ. ಇರುವ ಅವಧಿಯಲ್ಲಿ ಚೆನ್ನಾಗಿ ಆಡಳಿತ ನಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳನ್ನೇ ಸತ್ಯ ಮಾಡುವ ಕಾಂಗ್ರೆಸ್​

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಮಾಡುವ ಮೂಲಕ ಚುನಾವಣಾ ಆಯೋಗದ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಆಯುಕ್ತರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಆಯೋಗದಲ್ಲಿ ಅಭಿಪ್ರಾಯ ಭೇದ ಇದ್ದಿರಬಹುದು. ಆದರೆ, ಅದು ಸಾಂವಿಧಾನಿಕ ಸಂಸ್ಥೆಯಾಗಿದ್ದು ಅಧಿಕೃತ ಆದೇಶ ಹೊರಡಿಸುತ್ತದೆ. ಆಯೋಗದ ಆದೇಶದಿಂದ ಯಾವುದೇ ಅರ್ಹ ಮತದಾರರಿಗೂ ಅವರ ಹಕ್ಕು ತಪ್ಪಿಹೋಗಿಲ್ಲ. ಅವರ ಹಕ್ಕು ಮೊಟಕು ಆಗಿಲ್ಲ. ಆದರೂ ಚುನಾವಣಾ ಆಯೋಗದ ಮೇಲೆ ಪದೇಪದೇ ಸುಳ್ಳನ್ನೇ ಹೇಳಿ ಅದನ್ನೇ ಸತ್ಯವಾಗಿಸುವ ಪ್ರಯತ್ನ ಕಾಂಗ್ರೆಸ್​ನಿಂದ ಆಗುತ್ತಿದೆ. ಸಿಜೆಪಿಯೂ ಸಹ ಒಂದು ರಾಜಕೀಯ ಪಕ್ಷದ ಅಂಗವಾಗಿಯೇ ನಡೆದುಕೊಳ್ಳುತ್ತಿರುವುದು ಈಗ ಸಾಬೀತಾಗಿದೆ. ಹೀಗಾಗಿ ದೇಶದ ಯುವಜನತೆ ಅವರನ್ನು ಬೆಂಬಲಿಸುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದರು.

ಉಡುಪಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಇದ್ದರು.

ಕೊಂಕಣ ರೈಲ್ವೆಗೆ 7,760 ಕೋಟಿ ರೂ. ಅನುದಾನ

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕೆಂಬ ನಿಟ್ಟಿನಲ್ಲಿ ಈ ಭಾಗದ ಸಂಸದರಾದ ಬ್ರಿಜೇಶ್​ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ನಾನು ಅವಿರತ ಪ್ರಯತ್ನ ಮಾಡುತ್ತಲೇ ಇದ್ದೇವೆ. ಆದರೆ, ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ಕರ್ನಾಟಕ ಸರ್ಕಾರದ ಅನುಮತಿ ಬೇಕಿದೆ. ಇದರಲ್ಲಿ ಕೆಲ ತಾಂತ್ರಿಕ, ಆರ್ಥಿಕ ಕಾರಣ ತೊಡಕಾಗುತ್ತಿದೆ. ಅದು ಮುಂದಿನ ದಿನಗಳಲ್ಲಿ ಸರಿಯಾಗಲಿದೆ. ಆದರೆ, ವಿಲೀನ ಆಗುವವರೆಗೆ ಕೊಂಕಣ ರೈಲ್ವೆ ವ್ಯವಸ್ಥೆಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರಲ್ಲಿ ಮನವಿ ಮಾಡಿದ್ದೇವೆ. ಕೊಂಕಣ ರೈಲ್ವೆ ಇಲಾಖೆಯ ಪ್ರಸ್ತಾವನೆ ಹಿನ್ನೆಲೆಯಲ್ಲಿ ಇದೀಗ ಪ್ರಾಥಮಿಕ ಹಂತದಲ್ಲಿ 7,760 ಕೋಟಿ ರೂಪಾಯಿಗೂ ಅಧಿಕ ಅನುದಾನ ನೀಡಲು ಕ್ಯಾಬಿನೆಟ್​ನಲ್ಲಿ ಒಪ್ಪಿಗೆ ಲಭಿಸಿದೆ. ಹೀಗಾಗಿ ಪ್ರಧಾನಿ ಮೋದಿ, ಸಚಿವ ಸೋಮಣ್ಣ ಅವರಿಗೂ ಸಹ ಈ ಭಾಗದ ಜನರ ಪರವಾಗಿ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಕಾಗೇರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net