ವಿಶ್ವದಲ್ಲಿಯೇ ಆಧ್ಯಾತ್ಮಿಕ ಶ್ರೇಷ್ಠ ರಾಷ್ಟ್ರ ಹಿಂದೂಸ್ತಾನ
ಉಡುಪಿ ಗಣೇಶೋತ್ಸವ ಸಮಿತಿಯ ವಜ್ರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅನಾಥ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ವಿತರಿಸಲಾಯಿತು. ನಾಗೇಶ್ ಹೆಗ್ಡೆ, ಪ. ವಸಂತ ಭಟ್, ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ವಿಜಯ ರಾಘವ ರಾವ್, ಡಾ. ಕಟ್ಟೆ ರವಿರಾಜ್ ಆಚಾರ್ಯ, ಆನಂದ್ ಸುವರ್ಣ, ಡಾ. ಪ್ರತಾಪ್ ಮಧುಕರ್ ಕಾಮತ್, ಕೆ.ಮಂಜುನಾಥ್ ಹೆಬ್ಬಾರ್, ಎಂ.ವಲ್ಲಭ ಭಟ್ ಇತರರಿದ್ದರು.
Published on:
Copied
Follow Us
* ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಮತ
* ಕಡಿಯಾಳಿಯಲ್ಲಿ ಉಡುಪಿ ಗಣೇಶೋತ್ಸವದ ಸಮಾರೋಪ
ಉಡುಪಿ: ಮಾನವ ಸಂಸಾರಮುಖಿಯಾಗಿ ಬದುಕದೆ ಸಮಾಜಮುಖಿಯಾಗಿ ಜೀವಿಸಿ ಸಮಾಜದ ಋಣ ತೀರಿಸಬೇಕು. ಹಿಂದೂಸ್ಥಾನವು ಜಗತ್ತಿನಲ್ಲಿಯೇ ಶ್ರೇಷ್ಠ ಆಧ್ಯಾತ್ಮಿಕ ರಾಷ್ಟ್ರವಾಗಿದ್ದು, ಹಬ್ಬಗಳು ಈ ನಾಡಿನ ಅಸ್ಮಿತೆಯಾಗಿದೆ. ನಮ್ಮ ಪರಂಪರೆಯು ದಿವ್ಯತೆ, ಭವ್ಯತೆ ಹೊಂದಿದೆ. ದುರಿತಗಳು ಶ್ರೀರಾಮಚಂದ್ರ, ಸತ್ಯಹರಿಶ್ಚಂದ್ರರನ್ನೂ ಬಿಡಲಿಲ್ಲ. ಆದರೆ ಭಗವಂತನ ಹಾಗೂ ವಿಘ್ನನಿವಾರಕನಾದ ಗಣೇಶನ ಅನುಗ್ರಹವಿದ್ದರೆ ಸಕಲ ಕಷ್ಟಗಳೂ ಕರಗಿಹೋಗುತ್ತವೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇಗುಲದ ಹೊರಾಂಗಣದಲ್ಲಿ ಗುಜ್ಜಾಡಿ ನರಸಿಂಹ ನಾಯಕ್ ವೇದಿಕೆಯಲ್ಲಿ ಉಡುಪಿ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಹಾಗೂ ವಜ್ರ ಮಹೋತ್ಸವದ ನಿಮಿತ್ತ ಶನಿವಾರ (ಸೆ.19) ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹೋಟೆಲ್ ಉದ್ಯಮಿ ನಾಗೇಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಗಣೇಶೋತ್ಸವದ ಮೂಲಕವೂ ಉಡುಪಿ ಕಡಿಯಾಳಿಯ ಸಮಿತಿಯು ಸಮಾಜ ಸೇವೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ವಾರಗಳ ಕಾಲ ಯಶಸ್ವಿಯಾಗಿ ಗಣೇಶೋತ್ಸವ ಆಯೋಜಿಸಿದ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡ ಎಲ್ಲ ಭಗವದ್ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಅನಾಥರ ಶಿಕ್ಷಣಕ್ಕೆ ಆರ್ಥಿಕ ಸಹಕಾರ
ಕರೊನಾ ಸಂದರ್ಭದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಶಿಕ್ಷಣಕ್ಕೆ ಸಹಕರಿಸುತ್ತಿರುವ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 25 ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು.
ಸಮಿತಿಯ ಅಧ್ಯಕ್ಷ ಪ. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ವಜ್ರ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಕಟ್ಟೆ ರವಿರಾಜ್ ಆಚಾರ್ಯ, ಮತ್ಸ್ಯೋದ್ಯಮಿ ಆನಂದ್ ಸುವರ್ಣ ಮಲ್ಪೆ, ಆಭರಣ ಜ್ಯುವೆಲ್ಲರ್ಸ್ ಬೆಂಗಳೂರಿನ ಆಡಳಿತ ನಿರ್ದೇಶಕ ಡಾ. ಪ್ರತಾಪ್ ಮಧುಕರ್ ಕಾಮತ್, ವಜ್ರ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಕೆ.ಮಂಜುನಾಥ್ ಹೆಬ್ಬಾರ್, ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ವಲ್ಲಭ ಭಟ್ ಉಪಸ್ಥಿತರಿದ್ದರು.
ಸರಿತಾ ಪ್ರಾರ್ಥಿಸಿದರು. ಸಮಿತಿಯ ಸಹ ಕಾರ್ಯದರ್ಶಿ ಸತೀಶ್ ಕುಲಾಲ್ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ನಿತಿನ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಮಹಾ ಅನ್ನಸಂತರ್ಪಣೆಯಲ್ಲಿ 8 ಸಾವಿರಕ್ಕೂ ಅಧಿಕ ಜನರು ಪ್ರಸಾದ ಭೋಜನ ಸೇವಿಸಿದರು.
"
ಗಣೇಶೋತ್ಸವ ಆಚರಣೆಗೂ ಪೊಲೀಸ್ ಅನುಮತಿ, ಕಾನೂನು ಕಟ್ಟಳೆಯ ಚೌಕಟ್ಟು ಇರಬಾರದು. ಹಿಂದೂಸ್ಥಾನದಲ್ಲಿ ಹಿಂದುಗಳ ಹಬ್ಬದ ಆಚರಣೆಗೆ ಎಲ್ಲ ರೀತಿಯ ಸಹಕಾರ ಲಭಿಸುವಂತಾಗಬೇಕು. ಗಣೇಶನ ಹೆಸರಿನಲ್ಲಿ ಎಲ್ಲ ಹಿಂದೂ ಸಂಘಟನೆಗಳು ಒಂದಾಗಬೇಕು.