ಉಡುಪಿಯಲ್ಲಿ ಆಯೋಜಿಸಿದ್ದ 'ಪರಿಸರ ಮತ್ತು ಶಿಕ್ಷಣ ಸಮ್ಮೇಳನ'ದ ಸಮಾರೋಪದಲ್ಲಿ ಪ್ರೊ. ಫಣಿರಾಜ್ ಮಾತನಾಡಿದರು. ಪ್ರೊ. ಆರ್. ರಾಮಾನುಜಂ, ಶುಭಂಕರ್ ಚಕ್ರವರ್ತಿ, ಟಿ.ಎ. ಪ್ರಶಾಂತಬಾಬು, ಸೌಭಾಗ್ಯಾ ಸಿ., ಉದಯ್ ಗಾಂವಕಾರ, ಪ್ರಶಾಂತ ನಾಯಕ್ ಪಟ್ಲ ಇದ್ದರು.
Published on:
Copied
Follow Us
* ಚಿಂತಕ ಪ್ರೊ. ಫಣಿರಾಜ್ ವಿಷಾದ
* 'ಪರಿಸರ-ಶಿಕ್ಷಣ ಸಮ್ಮೇಳನ'ದ ಸಮಾರೋಪ
ಉಡುಪಿ: ನಾವು ಈಗ ನೋಡುತ್ತಿರುವ ಮಣಿಪಾಲ ಈ ಹಿಂದೆ ಹೀಗೆಯೇ ಇರಲಿಲ್ಲ. ಅಲ್ಲಿ ದಟ್ಟ ಕಾನನ ಇತ್ತಲ್ಲದೆ ಪಶ್ಚಿಮ ಘಟ್ಟದ ಕಣಿವೆಯೂ ಆಗಿತ್ತು. 2005ರಲ್ಲಿ ಅಲ್ಲಿನ ಮರಗಳಿಗೆ ಕೊಡಲಿ ಏಟು ಬಿತ್ತು. ಪರಿಸರ ರಕ್ಷಣೆಗೆ ಅನೇಕರು ವಿರೋಧಿಸಿದರೂ, ಹೋರಾಡಿದರೂ ಪ್ರಯೋಜನ ಆಗಲಿಲ್ಲ. ಮಣಿಪಾಲ ವ್ಯಾಲಿಯ ಹರಿದ್ವರ್ಣ ಕಾಡು ಮಾಯವಾಯಿತು. ತಂತ್ರಜ್ಞಾನ ಬೆಳೆದು ಪರಿಸರ ನಾಶವಾಗುತ್ತಿದೆ. ಡಿಸ್ಟೋಪಿಯನ್ ಜಗತ್ತು ರಚನೆಯಾಗಿದ್ದು, ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಪರಿಸರ ನಲುಗಿ ಹೋಗುತ್ತಿದೆ ಎಂದು ಸಂಸ್ಕೃತಿಯ ಚಿಂತಕ ಪ್ರೊ. ಫಣಿರಾಜ್ ವಿಷಾದ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾರತ ಜ್ಞಾನ&ವಿಜ್ಞಾನ ಸಮಿತಿ (ಬಿಜಿವಿಎಸ್) ಉಡುಪಿ ಜಿಲ್ಲೆ ವತಿಯಿಂದ ಪ್ರೊ. ಮಾಧವ ಗಾಡ್ಗೀಳ ಸ್ಮರಣಾರ್ಥ ಎರಡು ದಿನಗಳ ಕಾಲ ಆಯೋಜಿಸಿದ್ದ 'ಪರಿಸರ ಮತ್ತು ಶಿಕ್ಷಣ ಸಮ್ಮೇಳನ'ದಲ್ಲಿ ಭಾನುವಾರ (ಮೇ 10) ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪರಿಸರ ಮತ್ತು ಶಿಕ್ಷಣ ಸಮ್ಮೇಳನದ ಸಮಾರೋಪದಲ್ಲಿ ಪ್ರೊ. ಫಣಿರಾಜ್ ಮಾತನಾಡಿದರು.
ಎಐ ಅಗತ್ಯತೆ ಏನು?
ಅಜೀಮ್-ಪ್ರೇಮ್ಜಿ ವಿಶ್ವ ವಿದ್ಯಾಲಯದ ಥಿಯರೇಟಿಕಲ್ ಕಂಪ್ಯೂಟರ್ ಸೈನ್ಸ್ನ ವಿಜ್ಞಾನಿ ಪ್ರೊ. ಆರ್. ರಾಮಾನುಜಂ ಮಾತನಾಡಿ, ಸಿಬಿಎಸ್ಇ ಪಠ್ಯಕ್ರಮದಲ್ಲಿ 3ನೇ ತರಗತಿಯಿಂದ 10ನೇ ತರಗತಿಯವರೆಗೆ ಎಐ (ಕೃತಕ ಬುದ್ಧಿಮತ್ತೆ) ಶಿಕ್ಷಣ ಅಳವಡಿಸಿದ್ದು, ಅನೇಕ ಖಾಸಗಿ ಶಾಲೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ನಮ್ಮ ಶಾಲೆಯಲ್ಲಿ ಎಐ ಶಿಕ್ಷಣವಿದೆ ಎಂದು ಪಾಲಕರನ್ನು ಪ್ರೇರೇಪಿಸುತ್ತಿದ್ದಾರೆ. 3ನೇ ತರಗತಿಯ ಮಕ್ಕಳಿಗೆ ಈ ಶಿಕ್ಷಣದ ಅನಿವಾರ್ಯತೆ ಇದೆಯೇ? ಈ ಶಿಕ್ಷಣ ಎದುರಿಸುವಲ್ಲಿ ಕೆಲವು ಸಮಸ್ಯೆಯಿದೆ. ಈ ಕುರಿತಾಗಿ ಮಾಧ್ಯಮಗಳೂ ಸಹ ಸೂಕ್ತ ವರದಿ ಅಥವಾ ಸುದ್ದಿ ಪ್ರಕಟಿಸುತ್ತಿಲ್ಲ ಎಂದರು.
ಪ್ರೊ. ಆರ್. ರಾಮಾನುಜಂ ಮಾತನಾಡಿದರು.
ಬಿಜಿವಿಎಸ್ನ ರಾಜ್ಯ ಉಪಾಧ್ಯಕ್ಷ ಶುಭಂಕರ್ ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು, ಸಮಿತಿಯ ಹಾಸನ ಜಿಲ್ಲೆಯ ಉಪಾಧ್ಯಕ್ಷೆ ಸೌಭಾಗ್ಯಾ ಸಿ., ಉಪಸ್ಥಿತರಿದ್ದರು.
ಸಮಿತಿಯ 'ಟೀಚರ್' ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ್ ಗಾಂವಕಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ವಂದಿಸಿದರು. ರವಿ ಕಟ್ಕೆರೆ ಕಾರ್ಯಕ್ರಮ ನಿರೂಪಿಸಿದರು.
ತಜ್ಞರು, ಲೇಖಕರಿಂದ ವಿವಿಧ ಅಧಿವೇಶನ
ಉದಯ್ ಗಾಂವಕಾರ ಮಾತನಾಡಿದರು.
ಎರಡನೇ ದಿನದ ಸಮ್ಮೇಳನದಲ್ಲಿ ಬೆಳಗ್ಗೆ 9:30ಕ್ಕೆ ಸಮಾನ ಶಿಕ್ಷಣ ಹೋರಾಟಗಾರ ಬಿ. ಶ್ರೀಪಾದ್ ಭಟ್ ಹಾಗೂ ಶಿಕ್ಷಣ ಚಿಂತಕ ಎಫ್.ಸಿ. ಚೇಗರೆಡ್ಡಿ ಅವರು 'ಶಾಲಾ ಶಿಕ್ಷಣದ ಸದ್ಯದ ಬಿಕ್ಕಟ್ಟುಗಳು' ವಿಷಯ ಕುರಿತು ಮಾತನಾಡಿದರು. 'ಅನುಭವ, ಕಲಿಕೆ ಮತ್ತು ತಂತ್ರಜ್ಞಾನ' ವಿಷಯಾಧಾರಿತ ಅಧಿವೇಶನದಲ್ಲಿ 'ತರಗತಿಯೊಳಗೆ ಪ್ರಕೃತಿ ಪಾಠ'ದ ಕುರಿತು ಪರಿಸರ ಸಂವಹನಕಾರ್ತಿ ಅಭಿಷೇಕಾ ಕೃಷ್ಣಗೋಪಾಲ್ ಮಾತನಾಡಿದರು. ಮಧ್ಯಾಹ್ನ 2 ಗಂಟೆಗೆ 'ಕಲಿಕೆ-ಒಂದು ಸಂವಾದ' ಕುರಿತು ಡಾ. ಶ್ರೀಪಾದ್ ಭಟ್ ಹಾಗೂ ಲೇಖಕಿ ಸುಧಾ ಆಡುಕಳ ಅವರು ಮಾತುಕತೆ ನಡೆಸಿದರು. ಉಡುಪಿಯ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಸಮನ್ವಯ ನಡೆಸಿದರು. ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ನಿರ್ದೇಶನದಲ್ಲಿ ಬ್ರಹ್ಮಾವರದ ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 'ಕಿಟಕಿ ಪಕ್ಕ ನಿಂತ ಹುಡುಗಿ' ಮಕ್ಕಳ ನಾಟಕ ಪ್ರದರ್ಶಿಸಿದರು.