ಶ್ರೀಕೃಷ್ಣನ ನಾಡು ಮೂಡಿಸಿದೆ ಸಂಗೀತದ ಛಾಪು

ಉಡುಪಿಯಲ್ಲಿ ರಾಗ ಧನ ಸಂಸ್ಥೆ ಆಯೋಜಿಸಿದ್ದ ತ್ರಿಮೂರ್ತಿ ಉತ್ಸವ ಸಮಾರೋಪದಲ್ಲಿ ಡಾ. ಶ್ರೀಕಿರಣ ಹೆಬ್ಬಾರ್​ ಮಾತನಾಡಿದರು. ಲಕ್ಷ್ಮೀ ಗುರುರಾಜ್​, ಪ್ರೊ. ಆರ್​.ಎಲ್​. ಭಟ್​, ಉಮಾಶಂಕರಿ ಟಿ.ಕೆ. ಇದ್ದರು.
ಉಡುಪಿಯಲ್ಲಿ ರಾಗ ಧನ ಸಂಸ್ಥೆ ಆಯೋಜಿಸಿದ್ದ ತ್ರಿಮೂರ್ತಿ ಉತ್ಸವ ಸಮಾರೋಪದಲ್ಲಿ ಡಾ. ಶ್ರೀಕಿರಣ ಹೆಬ್ಬಾರ್​ ಮಾತನಾಡಿದರು. ಲಕ್ಷ್ಮೀ ಗುರುರಾಜ್​, ಪ್ರೊ. ಆರ್​.ಎಲ್​. ಭಟ್​, ಉಮಾಶಂಕರಿ ಟಿ.ಕೆ. ಇದ್ದರು.
Published on

* ನೃತ್ಯ ವಿದುಷಿ ಲಕ್ಷ್ಮೀ ಗುರುರಾಜ್​ ಬಣ್ಣನೆ

* ತ್ರಿಮೂರ್ತಿ ಉತ್ಸವ ಸಮಾರೋಪ ಸಮಾರಂಭ

ಉಡುಪಿ: ನಾಲ್ಕು ದಶಕದ ಹಿಂದೆ ಉಡುಪಿಯು ಸಂಗೀತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಲಿಲ್ಲ. ಶ್ರೀಕೃಷ್ಣನ ನಾಡು ಎಂದೇ ಪ್ರಸಿದ್ಧವಾಗಿತ್ತು. ಮಧ್ವರು, ವಾದಿರಾಜರು, ನಾಟಕಕಾರರು, ಯಕ್ಷಗಾನ ಕಲಾವಿದರು, ಸಾಹಿತಿಗಳು, ಸಂತರು ಉಡುಪಿಯನ್ನು ಖ್ಯಾತಗೊಳಿಸಿದ್ದಾರೆ. ಆದರೆ, ಇತ್ತೀಚೆಗಿನ ಎರಡು ದಶಕದಲ್ಲಿ ಸಂಗೀತ&ನೃತ್ಯ ಕ್ಷೇತ್ರದಲ್ಲಿಯೂ ಸಾಧಿಸುವ ಮೂಲಕ ಉಡುಪಿಯೆಂದರೆ ಈಗ ಸಂಗೀತದ ನಾಡು ಎಂಬ ಛಾಪು ಮೂಡಿಸಿದೆ ಎಂದು ನೃತ್ಯನಿಕೇತನ ಉಡುಪಿಯ ನೃತ್ಯ ವಿದುಷಿ ಲಕ್ಷ್ಮೀ ಗುರುರಾಜ್​ ಬಣ್ಣಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗ ಧನ ಸಂಸ್ಥೆ ಉಡುಪಿ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ ಮೂರು ದಿನಗಳ 38ನೇ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ 3ನೇ ದಿನವಾದ ಭಾನುವಾರ (ಫೆ.8) ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ದೇವರೊಂದಿಗೆ ಅನುಸಂಧಾನ ಮಾರ್ಗ

ರಾಗ ಧನ ಸಂಸ್ಥೆಯ ಅಧ್ಯಕ್ಷ ಡಾ. ಶ್ರೀಕಿರಣ ಹೆಬ್ಬಾರ್​ ಮಾತನಾಡಿ, ಸನಾತನ ಧರ್ಮದ ಅಂಗವಾಗಿ ಆಶ್ರಯ ಸಂಸತಿಯಲ್ಲಿ ಅರಳಿದ ಹಲವಾರು ಆರಾಧನೆಯ ಕಲೆಗಳಲ್ಲಿ ಶಾಸ್ತ್ರೀಯ ಸಂಗೀತ ಶ್ರೇಷ್ಠವೆನಿಸಿಕೊಂಡಿದೆ. ಆತ್ಮೋನ್ನತಿ, ವಯಕ್ತಿಕ ನೆಲೆಯ ಸಾಧನೆಗೆ ಸೀಮಿತವಾಗಿದ್ದ ಸಂಗೀತ ಕ್ಷೇತ್ರ ಕಾಲಾಂತರದಲ್ಲಿ ಪ್ರದರ್ಶನದ ಭಾಗವಾಗಿಯೂ ಮಾರ್ಪಟ್ಟಿದ್ದರಿಂದ ಶ್ರೋತೃ ವರ್ಗವೂ ಹುಟ್ಟಿಕೊಂಡಿತೆಂಬ ಕಲ್ಪನೆಯಿದೆ. ಹೀಗಾಗಿ ಸಂಗೀತದಲ್ಲಿ ರಂಜನೀಯವೂ ಪ್ರಮುಖವಾಗುತ್ತದೆ. ಮೂಲ ಉದ್ದೇಶ ಭಕ್ತಿ ಉದ್ದೀಪನಗೊಳಿಸುವ ಹಾಗೂ ಭಗವಂತನೊಂದಿಗೆ ಅನುಸಂಧಾನ ಮಾಡಿಕೊಳ್ಳಲು ಇರುವ ಮಾರ್ಗ ಸಂಗೀತವಾಗಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಆರ್​.ಎಲ್​. ಭಟ್​ ಉಪಸ್ಥಿತರಿದ್ದರು. ಅಥರ್ವ್​ ದೀಪರಾಜ್​ ಹೆಗಡೆ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಟಿ.ಕೆ. ಸ್ವಾಗತಿಸಿದರು. ವಾಸುದೇವ್​ ಭಟ್​ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಖಜಾಂಚಿ ಪ್ರೊ. ಕೆ.ಸದಾಶಿವ ರಾವ್​ ಹಾಗೂ ಕೆ.ಆರ್​. ರಾವೇಂದ್ರ ಆಚಾರ್ಯ ಸಹಕರಿಸಿದರು.

ಹಿರಿ-ಕಿರಿಯ ಕಲಾವಿದರಿಂದ ಸಂಗೀತ ಕಛೇರಿ

ಬೆಳಗ್ಗೆ 9ರಿಂದ 11ರ ವರೆಗೆ ಮಹಾರಾಷ್ಟ್ರದ ಧನಂಜಯ್​ ಜೋಶಿ ನಾಂದೇಡ್​ ಅವರಿಂದ ಹಿಂದುಸ್ತಾನಿ ಗಾಯನ ನಡೆಯಿತು. ತಬಲಾದಲ್ಲಿ ಮಾಧವ್​ ಆಚಾರ್ಯ ಉಡುಪಿ, ಹಾಮೋರ್ನಿಯಂನಲ್ಲಿ ಪ್ರಸಾದ್​ ಕಾಮತ್​ ಉಡುಪಿ ಸಹಕರಿಸಿದರು. ಬೆಳಗ್ಗೆ 11:15ರಿಂದ ಮಧ್ಯಾಹ್ನ 12:45ರ ವರೆಗೆ ಕಾರ್ಕಳ ಆತ್ರೇಯೀ ಕೃಷ್ಣಾ ಅವರಿಂದ ಗಾಯನ ನಡೆಯಿತು. ವಯೋಲಿನ್​ನಲ್ಲಿ ಕೇಶವ್​ ಮೋಹನಕುಮಾರ್​, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು. ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ ವಿದುಷಿ ಅದಿತಿ ಕೋಂಕೋಡಿ ಅವರ ಗಾಯನ ನಡೆಯಿತು. ವಯೋಲಿನ್​ನಲ್ಲಿ ಮಂಗಳೂರಿನ ಗೌತಮ್​ ಪಿ.ಜಿ., ಮೃದಂಗದಲ್ಲಿ ಹರಿಹರಪುರದ ಧೀಮಂತ್​ ಭಟ್​ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ವಿನಯ್​ ಶರ್ವ ಅವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ವಯೋಲಿನ್​ನಲ್ಲಿ ಕೇಶವ್​ ಮೋಹನಕುಮಾರ್​, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net