ಸಮನ್ವಯದಿಂದ ನಿಭಾಯಿಸಿ ಪ್ರಕೃತಿಯ ಸವಾಲು

ಉಡುಪಿಯಲ್ಲಿ ಆಯೋಜಿಸಿದ್ದ ಹವಾಮಾನ ಬದಲಾವಣೆ ಕುರಿತ ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮವನ್ನು ಕ್ಷಮಾ ಪಾಟೀಲ್​ ಉದ್ಘಾಟಿಸಿದರು. ಡಾ. ಸರಿತಾ ಬೋಯಾ, ಡಾ. ರೆಡ್ಡಪ್ಪ, ಕುಮಾರಸ್ವಾಮಿ, ಪ್ರಸನ್ನಕುಮಾರ್​ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಹವಾಮಾನ ಬದಲಾವಣೆ ಕುರಿತ ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮವನ್ನು ಕ್ಷಮಾ ಪಾಟೀಲ್​ ಉದ್ಘಾಟಿಸಿದರು. ಡಾ. ಸರಿತಾ ಬೋಯಾ, ಡಾ. ರೆಡ್ಡಪ್ಪ, ಕುಮಾರಸ್ವಾಮಿ, ಪ್ರಸನ್ನಕುಮಾರ್​ ಇತರರಿದ್ದರು.
Published on

* ಅಧಿಕಾರಿಗಳಿಗೆ ಡಾ. ಸರಿತಾ ಬೋಯಾ ಕರೆ

* ಹವಾಮಾನ ಬದಲಾವಣೆ ಕ್ರಿಯಾ ಯೋಜನೆ ತರಬೇತಿ 

ಉಡುಪಿ: ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆಯಲ್ಲಿನ ಪ್ರಕೃತಿ ಸವಾಲುಗಳನ್ನು ನಿಭಾಯಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಎಂಪ್ರಿ ಹವಾಮಾನ ಬದಲಾವಣೆ ವಿಭಾಗದ ಹಿರಿಯ ಸಮಾಲೋಚಕಿ ಡಾ. ಸರಿತಾ ಬೋಯಾ ಕರೆ ನೀಡಿದರು.
ಉಡುಪಿ ಜಿಲ್ಲಾಡಳಿತದ ಸಂಕೀರ್ಣದಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಶುಕ್ರವಾರ (ಮೇ 15) ಆಯೋಜಿಸಿದ್ದ ಹವಾಮಾನ ಬದಲಾವಣೆ ಕುರಿತ ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ಷಮತೆಯ ಗುರಿ

ರಾಜ್ಯ ಸರ್ಕಾರದ ನಿರ್ದೇಶನದಂತೆ ಕರ್ನಾಟಕದ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ ಸಿದ್ಧಪಡಿಸಿ 2024ರಲ್ಲಿ ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮೋದನೆ ಪಡೆದಿದೆ. ಈ ಯೋಜನೆಯಡಿ ವಿವಿಧ ಇಲಾಖೆಗಳು 2025&-2030ರ ಅವಧಿಗೆ ಪ್ರಮುಖ ಕಾರ್ಯಕ್ಷಮತಾ ಸೂಚಕ ಗುರಿ ನಿಗದಿಪಡಿಸಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕಿದೆ. ಕಳೆದ ವರ್ಷ ರಾಜ್ಯದ 22 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ತರಬೇತಿ ಮುಗಿದಿದೆ. 2026-&27ನೇ ಸಾಲಿನಲ್ಲಿ ಎಲ್ಲ 31 ಜಿಲ್ಲೆಗಳಲ್ಲಿ ತರಬೇತಿ ವಿಸ್ತರಿಸಲಾಗುತ್ತಿದೆ. ಕ್ರಿಯಾಯೋಜನೆಗೆ ಒಟ್ಟು 15 ಇಲಾಖೆ ಒಳಪಡಲಿದೆ ಎಂದರು.

ವಿವಿಧ ಮಾಹಿತಿ

ತೇಜು ಕುಮಾರ್​ ಎನ್​. ಮಾತನಾಡಿ, ರಾಜ್ಯ ಜಲ ಸಂಪನ್ಮೂಲ ಕ್ರಿಯಾ ಯೋಜನೆ ಕುರಿತು ಹಾಗೂ ಜಿಲ್ಲೆಯಲ್ಲಿನ ಸ್ಥಳಿಯ ನೀರಿನ ಮೂಲ, ಅಂತರ್ಜಲ ಮಟ್ಟ, ಮಳೆಯ ಪ್ರಮಾಣ, ನದಿಗಳ ನೀರಿನ ಗುಣಮಟ್ಟದ ಬಗ್ಗೆ ವಿವರಿಸಿದರು. ಜಿಲ್ಲಾ ಎನ್​ಆರ್​ಡಿಎಂಎಸ್​ ಕೇಂದ್ರದ ಅಧಿಕಾರಿ ವಿಕ್ರಮ್​ ಆರ್​. ಮಾತನಾಡಿ, ಕೇಂದ್ರದ ಕಾರ್ಯವೈಖರಿ, ಇಲಾಖೆಗಳಿಗೆ ದತ್ತಾಂಶ ನಿರ್ವಹಣೆಗೆ ಸಹಕರಿಸುವ ಕುರಿತು ಮಾಹಿತಿ ನೀಡಿದರು. 
ಆರಂಭದಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್​ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ರೆಡ್ಡಪ್ಪ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ, ಮೆಸ್ಕಾಂನ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಪ್ರಸನ್ನಕುಮಾರ್​, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಎಂಪ್ರಿ ತರಬೇತಿ ಮುಖ್ಯಸ್ಥೆ ಲತಾ ಎಂ.ಎಚ್​. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
"

ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ, ತಾಪಮಾನ ಹೆಚ್ಚಳ, ಚಂಡಮಾರುತ, ಪ್ರವಾಹದಿಂದಾಗಿ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಜೀವನೋಪಾಯ ಮತ್ತು ಆರ್ಥಿಕತೆ ದುರ್ಬಲಗೊಳಿಸುತ್ತದೆ. ಜತೆಗೆ ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಉಂಟಾಗುತ್ತದೆ. ಪ್ರಕೃತಿಯೂ ಸಹ ತನ್ನದೆ ಆದವ್ಯವಸ್ಥೆ ಹೊಂದಿದ್ದು, ಅದರಲ್ಲಿ ಸ್ವಲ್ಪ ಏರಿಳಿತವಾದರೂ ಹಲವು ಅಸಮತೋಲನಕ್ಕೆ ಕಾರಣವಾಗುತ್ತದೆ.

— ಡಾ. ಸರಿತಾ ಬೋಯಾ. ಎಂಪ್ರಿ ಹವಾಮಾನ ಬದಲಾವಣೆ ವಿಭಾಗದ ಹಿರಿಯ ಸಮಾಲೋಚಕಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net