ಉಡುಪಿಯ ರಾಜಾಂಗಣದಲ್ಲಿ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕ ಡಾ. ವಿಜಯಪ್ರಕಾಶ್ ಮತ್ತು ತಂಡದವರು ಭಕ್ತಿ ಸಂಗೀತ ಕಛೇರಿ ನಡೆಸಿದರು.
Published on:
Copied
Follow Us
* ರಾಜಾಂಗಣದಲ್ಲಿ 'ವಿಪಿ ಸರ್' ಶಾಸ್ತ್ರೀಯ ಲಹರಿ
* ದೇವನಾಮ ಸಂಕೀರ್ತನೆಯ ರಸಮಂಜರಿ
ಉಡುಪಿ:ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ನಿಮಿತ್ತ ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಖ್ಯಾತ ಹಿನ್ನಲೆ ಗಾಯಕ ಡಾ.ವಿಜಯಪ್ರಕಾಶ್ ತಂಡದಿಂದ 'ಶಾಸ್ತ್ರೀಯ ಮತ್ತು ಭಕ್ತಿಗೀತೆಯ ಸಂಗೀತ ಕಛೇರಿ ನಡೆಯಿತು.
ವಿವಿಧ ಭಾಷೆಗಳ ಚಲನಚಿತ್ರಗಳ ಹಿನ್ನಲೆ ಗಾಯನದಿಂದಲೇ ದೇಶ-ವಿದೇಶಗಳ ಗಮನ ಸೆಳೆದಿರುವ 'ವಿಪಿ ಸರ್' ಖ್ಯಾತಿಯ ಗಾಯಕ ಡಾ.ವಿಜಯಪ್ರಕಾಶ್, ತಮ್ಮ ಕರ್ನಾಟಿಕ್ ಸಂಗೀತದ ವಿದ್ವತ್ ಪ್ರತಿಭೆ ಪ್ರದರ್ಶಿಸಿದರು. ತನ್ನ ತಂದೆಯೇ ರಚಿಸಿದ 'ಶ್ರೀ ಗಣಾಧಿಪ ನಮೋಸ್ತುತೆ' ಎಂಬ ವಿಘ್ನವಿನಾಶಕನಾದ ವಿನಾಯಕನ ಸ್ಮರಣೆಯೊಂದಿಗೆ ಆರಂಭದಲ್ಲಿ ಶಾಸ್ತ್ರೀಯ ಸಂಗೀತ ಕಛೇರಿ ಆರಂಭಿಸಿದರು.
ಬಳಿಕ 'ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೆ' ಎಂಬ ಹಾಡಿನೊಂದಿಗೆ ಕೃಷ್ಣನ ಭಕ್ತಿಗೀತೆಗಳ ಕಛೇರಿ ಆರಂಭಿಸಿದರು. ನಂತರ 'ಜಗದೋದ್ಧಾರನ ಆಡಿಸಿದಳು ಯಶೋದೆ' ಎಂಬ ಪುರಂದರ ದಾಸರ ಹಾಡನ್ನು ವಿಶಿಷ್ಟ ಶೈಲಿಯಲ್ಲಿ ಹಾಡಿ ನಂದಗೋಕುಲ ದರ್ಶಿಸಿದರು. ದೇವರ ವಿವಿಧ ಸಂಕೀರ್ತನೆಗಳ ಮೂಲಕ ಶ್ರೀಕೃಷ್ಣನ ಸನ್ನಿಧಿಯಲ್ಲಿ ಭಕ್ತಿರಸ ಹರಿಸಿದರು.
ಜನಮನ ಗೆದ್ದ ಗಾಯಕ
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ, ನಾನೇನ ಮಾಡಿದೆನೋ ಕೃಷ್ಣಯ್ಯ ನೀಯೆನ್ನ ಕಾಯಬೇಕೋ, ಓಂ ಶಿವೋಹಂ ರುದ್ರನಾಭಂ ಭಜೇ ಹಮ್ ಹಾಡಿ ಗಮನ ಸೆಳೆದರು. ಕಾರ್ಯಕ್ರಮ ಮುಗಿದ ಬಳಿಕ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಜೈ ಹೋ' ಹಾಡು ಹೇಳುವ ಮೂಲಕ ಜನಮನ ಗೆದ್ದರು.
ಸಂಗೀತ ಕಛೇರಿಯಲ್ಲಿ ಮ್ಮದಂಗ, ವಾಯೋಲಿನ್ ಹಾಗೂ ಮೋರ್ಸಿಂಗ್ ವಾದ್ಯಗಳ ಜುಗಲ್ ಬಂಧಿ ಕಾರ್ಯಕ್ರಮ ಪ್ರೇಕ್ಷಕರ ಭಾರಿ ಕರತಾಡನದೊಂದಿಗೆ ಮೆಚ್ಚುಗೆ ಪಡೆಯಿತು.
ವಯೋಲಿನ್ ನಲ್ಲಿ ಪ್ರಾದೇಶ ಆಚಾರ್, ಮೃದಂಗದಲ್ಲಿ ಅನಿರುದ್ಧ ಭಟ್, ತಬಲಾದಲ್ಲಿ ಜಗದೀಶ್ ಡಿ. ಕುರ್ತಕೋಟಿ, ರಿಧಮ್ ಪ್ಯಾಡ್ ನಲ್ಲಿ ಮಂಜುನಾಥ್ ಎನ್.ಎಸ್., ಕೀಬೋರ್ಡ್ ನಲ್ಲಿ ಆಕಾಶ್ ಪರ್ವ ಸಾಥ್ ನೀಡಿದರು. ಮಕ್ಕಳ ತಜ್ಞ ಡಾ. ಶ್ರೀಕಿರಣ ಹೆಬ್ಬಾರ್ ಅವರು ಎಲ್ಲ ಕಲಾವಿದರನ್ನು ಶ್ರೀಕೃಷ್ಣ ಮಠದ ಪರವಾಗಿ ಸ್ವಾಗತಿಸಿ, ಪ್ರೇಕ್ಷಕರಿಗೆ ಪರಿಚಯಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶೀರೂರು ವೇದವರ್ಧನ ಶ್ರೀಗಳು ಡಾ. ವಿಜಯಪ್ರಕಾಶ್ ಹಾಗೂ ಇತರ ಕಲಾವಿದರಿಗೆ ಶ್ರೀಕೃಷ್ಣನ ಅನುಗ್ರಹ ಮಂತ್ರಾಕ್ಷತೆ ಹಾಗೂ ಶ್ರೀಕೃಷ್ಣನ ಮೂರ್ತಿ ನೀಡಿ ಗೌರವಿಸಿದರು. ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು.
"
ಇಂದಿನ ಈ ಕ್ಷಣ ನಿಜಕ್ಕೂ ನನ್ನ ತಂದೆ-ತಾಯಿ ಮಾಡಿದ ಪುಣ್ಯದ ಫಲದ ಪ್ರತೀಕ. ಆ ಒಂದು ಫಲದಿಂದಾಗಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ, ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದಲ್ಲಿ ದೇವರ ಸಂಕೀರ್ತನ ಮಾಡುವ ಸದವಕಾಶ ನನಗೆ ಲಭಿಸಿದೆ.