ಬಂಡವಾಳಶಾಹಿಗಳ ಸೂಪರ್​ ಲಾಭಕ್ಕೆ ಅವಕಾಶ ಬೇಡ: ಸುರೇಶ್​ ಕಲ್ಲಾಗರ

ಸಿಐಟಿಯು ನೇತೃತ್ವದಲ್ಲಿ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನೆ ನಡೆಯಿತು.
ಸಿಐಟಿಯು ನೇತೃತ್ವದಲ್ಲಿ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನೆ ನಡೆಯಿತು.
Published on
ಉಡುಪಿ: ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾರ್ಮಿಕ ವರ್ಗವನ್ನು ಬಲಿಕೊಟ್ಟು ಬಂಡವಾಳಶಾಹಿಗಳ ಸೂಪರ್​ ಲಾಭಕ್ಕೆ ಅವಕಾಶ ಮಾಡಿಕೊಡುವ ನೀತಿಗಳನ್ನು ಕೈಬಿಡಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್​ ಕಲ್ಲಾಗರ ಆಗ್ರಹಿಸಿದರು.
ಕೇಂದ್ರ ಸರ್ಕಾರದ ರೈತ, ಕಾರ್ಮಿಕ ನೀತಿ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಯುವಜನರನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿಯ ಮೂಲಕ ಶೋಷಿಸುವ ನೀತಿಗಳು ಮುಂದೊಂದು ದಿನ ಜೆನ್​-ಝಡ್​ ಯುವಜನರ ಹೋರಾಟದ ಮಾದರಿಯಲ್ಲಿ ಬೃಹತ್​ ಪ್ರತಿಭಟನೆಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳು ತಿಂಗಳುಗಟ್ಟಲೆ ವೇತನ ಬಾಕಿ ಉಳಿಸಿಕೊಂಡಿದ್ದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಗ್ರಂಥಾಲಯಗಳ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ನೀಡದಿರುವುದು ಖಂಡನೀಯ ಎಂದರು.
ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಸೈಯ್ಯದ್​ ಅಲಿ, ಸುಭಾಶ್ಚಂದ್ರ ನಾಯಕ್​, ಉಮೇಶ್​ ಕುಂದರ್​, ಸುನೀತಾ ಶೆಟ್ಟಿ, ನಳಿನಿ, ನಾಗರಾಜ್​ ಕಾಂಚನ್​, ಸರೋಜ, ಪ್ರಭಾಕರ್​ ಕುಂದರ್​, ಮೋಹನಚಂದ್ರ, ನಾಗೇಶ್​, ರಮೇಶ್​, ವಾಮನ ಪೂಜಾರಿ, ಮುರುಳಿ, ರಂಗನಾಥ್​ ಸಾರಿಕ್​, ಶಾರದಾ, ಶರ್ಮಿಳಾ ಸೇರಿದಂತೆ ರೈತಕಾರ್ಮಿಕಕೂಲಿಕಾರರು ಭಾಗವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಕೋಶಾಧಿಕಾರಿ ಕವಿರಾಜ್​ ಎಸ್​. ಕಾಂಚನ್​ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಚೆ ಕಚೇರಿ ಎದುರಿನಿಂದ ರಸ್ತೆ ತಡೆಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಬಂಧಿಸಿದರು. ಬಳಿಕ ಬಂಧಿತರೆಲ್ಲರನ್ನು ಬಿಡುಗಡೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net