ಮಕ್ಕಳ ರಕ್ಷಣಾ ಕಾನೂನು ಅರಿವು ಅಗತ್ಯ

ಉಡುಪಿಯಲ್ಲಿ ಪೊಲೀಸರಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ನ್ಯಾ.ಮನು ಪಟೇಲ್​ ಉದ್ಘಾಟಿಸಿದರು. ನ್ಯಾ. ಸಂತೋಷ್​ ಶ್ರೀವಾತ್ಸವ್​, ಸುಧಾಕರ್​ ನಾಯ್ಕ್​, ಡಾ. ಕೊಣಿಲ ರಾಘವೇಂದ್ರ ಭಟ್​, ಜೂಹಿ ದಾಮೋದರ್​, ನಾಗರತ್ನಾ ನಾಯಕ್​ ಇದ್ದರು.
ಉಡುಪಿಯಲ್ಲಿ ಪೊಲೀಸರಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ನ್ಯಾ.ಮನು ಪಟೇಲ್​ ಉದ್ಘಾಟಿಸಿದರು. ನ್ಯಾ. ಸಂತೋಷ್​ ಶ್ರೀವಾತ್ಸವ್​, ಸುಧಾಕರ್​ ನಾಯ್ಕ್​, ಡಾ. ಕೊಣಿಲ ರಾಘವೇಂದ್ರ ಭಟ್​, ಜೂಹಿ ದಾಮೋದರ್​, ನಾಗರತ್ನಾ ನಾಯಕ್​ ಇದ್ದರು.
Published on

* ನ್ಯಾಯಾಧೀಶ ಮನು ಪಟೇಲ್​ ಅಭಿಪ್ರಾಯ

* ಬಾಲ ನ್ಯಾಯ ಕಾಯಿದೆ ಕಾರ್ಯಾಗಾರ ಉದ್ಘಾಟನೆ

ಉಡುಪಿ: ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳಿಗೆ ಸಂಬಂಧಿಸಿ ಮೊದಲನೇ ಹಂತದಲ್ಲಿ ತಳಮಟ್ಟದ ಕಾರ್ಯಕರ್ತರು ವ್ಯವಹರಿಸಿದರೆ, ಎರಡನೇ ಹಂತದಲ್ಲಿ ಪೊಲೀಸರು ಮಕ್ಕಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಹೀಗಾಗಿ ಪೊಲೀಸರಿಗೆ ಬಾಲ ನ್ಯಾಯ ಕಾಯಿದೆಯ ಸ್ಪಷ್ಟ ಅರಿವು ಇರಬೇಕಾಗುತ್ತದೆ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್​ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್​ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಕಾರದಲ್ಲಿ ಮಕ್ಕಳ ರಕ್ಷಣೆ ಸಂಬಂಧಿತ ಕಾಯಿದೆ ಕುರಿತು ಮಕ್ಕಳ ಕಲ್ಯಾಣ ಪೊಲೀಸ್​ ಅಧಿಕಾರಿ ಮತ್ತು ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್​ ಅಧಿಕಾರಿಗಳಿಗೆ ಶುಕ್ರವಾರ (ಫೆ.6) ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತರಬೇತಿಯಿಂದ ಅನುಕೂಲ

ಅಪಾಯದಲ್ಲಿ ಸಿಲುಕಿದ ಮಕ್ಕಳ ರಕ್ಷಣೆ ಮಾಡುವಾಗ ಅಥವಾ ಅಪರಾಧ ಚಟುವಟಿಕೆಗಳಲ್ಲಿ ನಿರತರಾದ ಮಕ್ಕಳನ್ನು ಕಾನೂನಿನ ಸುಪರ್ದಿಗೆ ತೆಗೆದುಕೊಳ್ಳುವಾಗ ಬಾಲ ನ್ಯಾಯ ಕಾಯಿದೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಮವಸ್ತ್ರದಲ್ಲಿರುವ ಪೊಲೀಸರನ್ನು ಕಂಡಾಗ ಮಕ್ಕಳು ಬೆದರುವ ಸಾಧ್ಯತೆ ಹೆಚ್ಚಿರುತ್ತವೆ. ಹೀಗಾಗಿ ಮಕ್ಕಳಿಗೆ ಸಂಬಂಧಿತ ಪ್ರಕರಣಗಳನ್ನು ದೊಡ್ಡವರ ಪ್ರಕರಣಗಳಂತೆ ವಿಚಾರಣೆ ಅಸಾಧ್ಯ. ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಕ್ರಿಯೆ ನಿಭಾಯಿಸಲು ಈ ತರಬೇತಿ ಸಹಕಾರಿಯಾಗಿದೆ ಎಂದರು.

ತ್ವರಿತವಾಗಿ ಸ್ಪಂದಿಸಿ

ಬಾಲ ನ್ಯಾಯ ಮಂಡಳಿಯ ಅಧ್ಯಕ್ಷ, ಎಸಿಜೆಎಂ 2ನೇ ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಸಂತೋಷ್​ ಶ್ರೀವಾತ್ಸವ್​ ಮಾತನಾಡಿ, ನ್ಯಾಯಾಲಯ ಮತ್ತು ಪೊಲೀಸ್​ ಇಲಾಖೆ ಕಾನೂನಿನ ರಕ್ಷಕರು. ಇಲಾಖೆಯಲ್ಲಿ ಮಕ್ಕಳೊಂದಿಗೆ ನೇರವಾಗಿ ವ್ಯವಹರಿಸುವ ಸಿಬ್ಬಂದಿಗೆ ಬಾಲ ನ್ಯಾಯ ಕಾನೂನಿನ ಮಾಹಿತಿ ಇರುವುದು ಅತ್ಯಗತ್ಯ. ಮಕ್ಕಳಿಗೆ ಸಂಬಂಧಿಸಿದ ದೂರುಗಳು ಬಂದಾಗ ಅದನ್ನು ರ್ನಿಲಸಿದೆ ತ್ವರಿತವಾಗಿ ಸ್ಪಂದಿಸಬೇಕು. ಅದರಿಂದ ಹಲವಾರು ಮುಗ್ಧ ಜೀವಗಳನ್ನು ಸಮಯೋಚಿತವಾಗಿ ರಕ್ಷಿಸಬಹುದು ಎಂದರು.
ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯ್ಕ್​ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ, ಯುನಿಸೆಫ್​ ಪ್ರಾದೇಶಿಕ ಸಂಯೋಜಕ ಡಾ. ಕೊಣಿಲ ರಾಘವೇಂದ್ರ ಭಟ್​ ಅವರು ಮಕ್ಕಳ ಕಲ್ಯಾಣ ಪೊಲೀಸ್​ ಅಧಿಕಾರಿಗಳಿಗೆ ತರಬೇತಿ ನೀಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜೂಹಿ ದಾಮೋದರ್​ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ನಾಯಕ್​ ಸ್ವಾಗತಿಸಿದರು. ಮಹೇಶ್​ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net