ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆ ಕಾರ್ಡ್ ವಿತರಣೆ ವಿಳಂಬ

ಮುಖ್ಯಮಂತ್ರಿ ವಿಮಾ ಯೋಜನೆ
ಮುಖ್ಯಮಂತ್ರಿ ವಿಮಾ ಯೋಜನೆ
Published on
ಉಡುಪಿ : ​ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಎಸ್.ಸಿ. ಮತ್ತು ಎಸ್.ಟಿ. ಕುಟುಂಬಗಳಿಗಾಗಿ ಜಾರಿಯಲ್ಲಿರುವ 'ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆ'ಯು ಸದ್ಯ ಫಲಾನುಭವಿಗಳಿಗೆ ವರದಾನವಾಗುವ ಬದಲು ತಲೆನೋವಾಗಿ ಪರಿಣಮಿಸಿದೆ. ಯೋಜನೆ ಅವಧಿ ಮುಗಿಯುತ್ತ ಬಂದರೂ 4670 ಫಲನುಭವಿಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಇನ್ನು ಕಾರ್ಡ್ ಲಭಿಸಿಲ್ಲ.
ಯೋಜನೆಯ ಅವಧಿ ಮುಗಿಯಲು ಇನ್ನು ಕೇವಲ 4 ತಿಂಗಳು ಬಾಕಿ ಇದ್ದರೂ, ಅನೇಕ ಕುಟುಂಬಗಳಿಗೆ ಇನ್ನೂ ಕಾರ್ಡ್‌ಗಳೇ ತಲುಪಿಲ್ಲ. ಒಂದು ಕುಟುಂಬದ ಕೆಲವರಿಗೆ ಮಾತ್ರ ಕಾರ್ಡ್ ನೀಡಿ ಉಳಿದವರನ್ನು ಎಂಟು ತಿಂಗಳಿಂದ ಅಲೆದಾಡಿಸಲಾಗುತ್ತಿದೆ. ವಿತರಿಸಲಾದ ಹೆಲ್ತ್ ಕಾರ್ಡ್‌ಗಳಲ್ಲಿ ಮನೆ ನಂಬರ್, ವಾರ್ಡ್ ಹೆಸರು ಮುಂತಾದ ಕನಿಷ್ಠ ಮಾಹಿತಿಗಳೂ ಇಲ್ಲ. ಇದು ತಾಂತ್ರಿಕವಾಗಿ ಕಾರ್ಡ್‌ಗಳನ್ನು ಅಮಾನ್ಯಗೊಳಿಸುವ ಸಾಧ್ಯತೆ ಇದೆ ಎಂಬ ಆತಂಕ ಫಲನುಭವಿಗಳನ್ನು ಕಾಡುತ್ತಿದೆ.
ಕಂಪನಿ ಬದಲಿಸಿದ್ದೆ ಎಡವಟ್ಟು
ನಗರ ಸಭೆ ಈ ಬಾರಿ ಖಾಸಗಿ ಇನ್ಶೂರೆನ್ಸ್ ಕಂಪನಿಗೆ ಹೊಸದಾಗಿ ಗುತ್ತಿಗೆ ನೀಡಿದ್ದು, ಕಂಪನಿಯ ಕಚೇರಿ ಮಂಗಳೂರಿನಲ್ಲಿದ್ದು, ಉಡುಪಿಯಲ್ಲಿ ಕೇವಲ ಇಬ್ಬರು ಮಹಿಳಾ ಸಿಬ್ಬಂದಿಗಳಿದ್ದಾರೆ. ಸಮಸ್ಯೆ ಬಂದಾಗ ಇವರು ದೂರವಾಣಿ ಕರೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರು ರೋಗಿಗಳ ಬಿಲ್ ಒಂದು ತಿಂಗಳು ಕಳೆದರೂ ಇನ್ನೂ ಪಾವತಿಯಾಗಿಲ್ಲ ಎಂಬುದು ದಲಿತ ಸಂಘಟನೆಗಳ ಆರೋಪ.
1 ಕೋಟಿ ರೂ. ಪ್ರೀಮಿಯಂ
ಈ ಯೋಜನೆಯಲ್ಲಿ ದಲಿತ ಕುಟುಂಬಕ್ಕೆ ಒಂದು ಲಕ್ಷ ರೂ. ವಿಮೆ ನೀಡಲಾಗಿತ್ತು. ಈ ಬಾರಿ ಪ್ರತಿ ಸದಸ್ಯರಿಗೆ 1 ಲಕ್ಷ ರೂ ವಿಮೆ ನಿಗದಿ ಮಾಡಲಾಗಿದೆ. ಇದಕ್ಕಾಗಿ ನಗರ ಸಭೆ 1, 04,61,080 ರೂ. ಇನ್ಸೂರೆನ್ಸ್ ಕಂಪನಿಗೆ ಪಾವತಿ ಮಾಡಿದೆ. ಈಗಾಗಲೇ 52.73 ಲಕ್ಷ ರೂ. ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ.
"

ಈ ವರ್ಷ ವಿಮಾ ಯೋಜನೆಗೆ ಹೆಚ್ಚುವರಿ ಅನುದಾನವನ್ನು ಮೀಸಲಿಟ್ಟದ್ದು, ವಿಮಾ ಕಂತು ಪಾವತಿ ತಡವಾದ ಕಾರಣ ಕಾರ್ಡ್ ಮುದ್ರಣ ವಿಳಂಬವಾಗಿದೆ. ಮೂಡುಬೆಟ್ಟು ಮತ್ತು ಕಸ್ತೂರ್ಬ ನಗರ ವಾರ್ಡಿನಲ್ಲಿ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗಿದ್ದು, ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದೆ. ಇದನ್ನು ಸರಿಪಡಿಸಲಾಗುವುದು. ಕಾರ್ಡ್ ಲಭಿಸದೆ ಇದ್ದರೂ ಅಗತ್ಯವಿದ್ದವರು ನೋಂದಣಿ ಸಂಖ್ಯೆಯನ್ನು ನೀಡಿ ಚಿಕಿತ್ಸೆ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net