ಶಿರೂರು ಮಠ ಪರ್ಯಾಯದ ಚಪ್ಪರ ಮುಹೂರ್ತ

ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್​ ಪ್ರದೇಶದಲ್ಲಿ ಭಾವೀ ಪರ್ಯಾಯ ಶಿರೂರು ಮಠದ ವತಿಯಿಂದ ಚಪ್ಪರ ಮುಹೂರ್ತ ನಡೆಯಿತು. ಸುದರ್ಶನ್​ ಭಟ್​, ಡಾ. ಉದಯಕುಮಾರ್​ ಸರಳತ್ತಾಯ, ಮಟ್ಟಾರು ರತ್ನಾಕರ್​ ಹೆಗ್ಡೆ, ಮೋಹನ್​ ಭಟ್​, ಸುಪ್ರಸಾದ್​ ಶೆಟ್ಟಿ, ಪದ್ಮಾ ರತ್ನಾಕರ್​, ವೀಣಾ ಎಸ್​. ಶೆಟ್ಟಿ, ವಿಷ್ಣುಪ್ರಸಾದ್​ ಪಾಡಿಗಾರ್​ ಇತರರಿದ್ದರು.
ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್​ ಪ್ರದೇಶದಲ್ಲಿ ಭಾವೀ ಪರ್ಯಾಯ ಶಿರೂರು ಮಠದ ವತಿಯಿಂದ ಚಪ್ಪರ ಮುಹೂರ್ತ ನಡೆಯಿತು. ಸುದರ್ಶನ್​ ಭಟ್​, ಡಾ. ಉದಯಕುಮಾರ್​ ಸರಳತ್ತಾಯ, ಮಟ್ಟಾರು ರತ್ನಾಕರ್​ ಹೆಗ್ಡೆ, ಮೋಹನ್​ ಭಟ್​, ಸುಪ್ರಸಾದ್​ ಶೆಟ್ಟಿ, ಪದ್ಮಾ ರತ್ನಾಕರ್​, ವೀಣಾ ಎಸ್​. ಶೆಟ್ಟಿ, ವಿಷ್ಣುಪ್ರಸಾದ್​ ಪಾಡಿಗಾರ್​ ಇತರರಿದ್ದರು.
Published on

* ಶ್ರೀಕೃಷ್ಣ ಮಠದ ಪಾರ್ಕಿಂಗ್​ ಪ್ರದೇಶದಲ್ಲಿ ಕಂಬ ಸ್ಥಾಪನೆ

ಉಡುಪಿ: ಶಿರೂರು ಮಠದಿಂದ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪೂಜಾ ಸೇವೆಯ ಮಹಾ ಪರ್ವಕ್ಕೆ ದಿನಗಣನೆ ಆರಂಭವಾಗಿದೆ. ಪರ್ಯಾಯದ ಸಂಪ್ರದಾಯದಂತೆ ನಾಲ್ಕು ಮುಹೂರ್ತಗಳು ಈಗಾಗಲೇ ಮುಗಿದಿದ್ದು, ಶುಕ್ರವಾರ ಬೆಳಗ್ಗೆ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ಪರ್ಯಾಯ ಮಹೋತ್ಸವಕ್ಕೆ ಬರುವ ಅತಿಥಿಗಳ ಸತ್ಕಾರ, ಅನ್ನ ಸಂತರ್ಪಣೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಅವುಗಳಿಗೂ ಮುನ್ನ ಮೊದಲ ಕಾರ್ಯಕ್ರಮವಾಗಿ ಚಪ್ಪರ ಮುಹೂರ್ತವನ್ನು ಶ್ರೀಕೃಷ್ಣ ಮಠದ ಪಾರ್ಕಿಂಗ್​ ಪ್ರದೇಶದಲ್ಲಿ ಕಂಬ ಸ್ಥಾಪನೆಯ ಮೂಲಕ ನಡೆಸಲಾಯಿತು.
ವಿದ್ಯೋದಯ ಶಾಲೆಯ ಹಿಂಭಾಗದ ಪ್ರದೇಶದಲ್ಲಿರುವ ಮೈದಾನದಲ್ಲಿ ಮಠದ ಅರ್ಚಕ ಸುದರ್ಶನ್​ ಭಟ್​ ನೇತೃತ್ವದಲ್ಲಿ ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನ ನಡೆದವು. ಮಠದ ದಿವಾನ  ಡಾ. ಉದಯಕುಮಾರ್​ ಸರಳತ್ತಾಯ, ಶಿರೂರು ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್​ ಹೆಗ್ಡೆ, ಕಾರ್ಯದರ್ಶಿ ಮೋಹನ್​ ಭಟ್​, ಸಂಚಾಲಕ ಸುಪ್ರಸಾದ್​ ಶೆಟ್ಟಿ, ಶ್ರೀಕಾಂತ್​ ನಾಯಕ್​, ರಾಜೇಶ್​ ರಾವ್​, ಪದ್ಮಾ ರತ್ನಾಕರ್​, ವೀಣಾ ಎಸ್​. ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ನಂದನ್​ ಜೈನ್​, ವಿಷ್ಣುಪ್ರಸಾದ್​ ಪಾಡಿಗಾರ್​, ಮಠದ ಕೊಟ್ಟಾರಿ ಸದಾಶಿವ ಎಂ. ಭಟ್​ ಇತರರು ಉಪಸ್ಥಿತರಿದ್ದರು.

ಸುವಸ್ತುಗಳನ್ನು ಸಂಗ್ರಹಿಸುವ ಬೃಹತ್​ ಕಣಜ

ಎಲ್ಲ ಗ್ರಹಾನುಕೂಲಗಳು ಸಿದ್ಧಿಯಾಗಿ ನಡೆಸುವುದೇ ಮುಹೂರ್ತವಾಗಿದೆ. ನರಸಿಂಹನನ್ನು ಸ್ಮರಿಸಿ, ಮುಹೂರ್ತದೊಂದಿಗೆ ವಾತಾವರಣವನ್ನು ನಿರ್ಧರಿಸಲಾಗಿದೆ. ಪರ್ಯಾಯೋತ್ಸವಕ್ಕಾಗಿ ಮಠದ ಪರಂಪರೆಯಲ್ಲಿ 4 ಮುಹೂರ್ತಗಳನ್ನು ಹೇಳಲಾಗಿದೆ. ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಧಾನ್ಯ ಮುಹೂರ್ತ ಪ್ರಮುಖವಾದುದಾಗಿದೆ. ಅದನ್ನು ಭಾವೀ ಪರ್ಯಾಯ ಶ್ರೀಪಾದರಾದ ಶಿರೂರು ವೇದವರ್ಧನ ಶ್ರೀಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಗಿದೆ. ಇದು ಹೆಚ್ಚುವರಿ ಮುಹೂರ್ತ. ಭಕ್ತರು ನೀಡುವ ಎಲ್ಲ ಬಗೆಯ ಸುವಸ್ತುಗಳನ್ನು ಸಂಗ್ರಹಿಸಲು ಸಿದ್ಧಪಡಿಸುವ ಬೃಹತ್​ ಕಣಜವೇ ಈ ಚಪ್ಪರ ಮುಹೂರ್ತವಾಗಿದೆ ಎಂದು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ತಿಳಿಸಿದರು.
"

ಪರ್ಯಾಯ ಉತ್ಸವದಲ್ಲಿ ಚಪ್ಪರ ಮುಹೂರ್ತ ಅತ್ಯಂತ ವಿಶೇಷವಾದ ಕಾರ್ಯವಾಗಿದೆ. ಇದು ಭಕ್ತರು ನೀಡುವ ಎಲ್ಲ ಬಗೆಯ ಹೊರೆಕಾಣಿಕೆಯನ್ನು ಸಂಗ್ರಹಿಸುವ ಬೃಹತ್​ ಪ್ರಮಾಣದ ಚಪ್ಪರವಾಗಿದೆ. ಜ.9ರಂದು ಶಿರೂರು ಶ್ರೀಗಳ ಪುರಪ್ರವೇಶವಾಗಲಿದ್ದು, 5 ಸಾವಿರಕ್ಕೂ ಅಧಿಕ ಜನರು ಸಂಭ್ರಮದಿಂದ ಅವರನ್ನು ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಿದ್ದಾರೆ. ಜ.10ರಿಂದ ಜ.17ರ ವರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ದಿನವೂ ಆಗಮಿಸುವ ಹೊರೆಕಾಣಿಕೆ ಸ್ವೀಕಾರದ ಮೆರವಣಿಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net