ಅವ್ಯವಸ್ಥೆ ಆಗರ ಮೆಲ್ಕಾರ್ ಜಂಕ್ಷನ್

 ಮೆಲ್ಕಾರ್‌ನಲ್ಲಿ ಬಸ್ಸುಗಳು ನಿಲುಗಡೆಯಾಗುವ ಸ್ಥಳ,
ಮೆಲ್ಕಾರ್‌ನಲ್ಲಿ ಬಸ್ಸುಗಳು ನಿಲುಗಡೆಯಾಗುವ ಸ್ಥಳ,
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಪ್ರಯಾಣಿಕರು ಬಸ್ಸಿಗಾಗಿ ಕಾಯುವುದು ಒಂದು ಕಡೆಯಾದರೆ ಬಸ್‌ಗಳು ನಿಲ್ಲುವ ಸ್ಥಳವೇ ಮತ್ತೊಂದು ಕಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ಬಸ್ ಸ್ಟಾಪ್ ಬೋರ್ಡ್‌ಇರುವುದು ಇನ್ನೊಂದೆಡೆ! ಇನ್ನು ಪ್ರಯಾಣಿಕರು ಕುಳಿತುಕೊಳ್ಳಲು ನಿರ್ಮಿಸಲಾದ ತಂಗುದಾಣ ಇರುವುದು ಮತ್ತೊಂದೆಡೆ!
ಬಸ್ ನಿಲ್ಲುವ ಕಡೆ ಪ್ರಯಾಣಿಕರ ತಂಗುದಾಣವಿಲ್ಲ, ತಂಗುದಾಣವಿರುವಲ್ಲಿ ಬಸ್ ನಿಲ್ಲುವುದಿಲ್ಲ ಮತ್ತು ಅಲ್ಲಿಗೆ ಜನರೂ ಹೋಗುವುದಿಲ್ಲ. ಒಂದಕ್ಕೊಂದು ಸಂಬಂಧವೇ ಇಲ್ಲದಂತಿರುವ ಈ ವಿಚಿತ್ರ ಬಸ್ ನಿಲ್ದಾಣದ ಅವ್ಯವಸ್ಥೆ ಕಂಡುಬರುತ್ತಿರುವುದು ಬಂಟ್ವಾಳ ತಾಲೂಕಿನ ಪ್ರಮುಖ ಜಂಕ್ಷನ್ ಮೆಲ್ಕಾರ್‌ನಲ್ಲಿ.
ಚತುಷ್ಪಥ ಕಾಮಗಾರಿ ತಂದ ಸಂಕಷ್ಟ: ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ ಚತುಷ್ಪಥ ಹೆದ್ದಾರಿ ನಿರ್ಮಾಣಗೊಂಡ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಂದೊಂದೇ ಅವಾಂತರಗಳು ಬೆಳಕಿಗೆ ಬರುತ್ತಿವೆ. ಮೆಲ್ಕಾರ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣಗೊಂಡ ಬಳಿಕ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೆಲ್ಕಾರ್‌ನಲ್ಲಿ ಜನರು ನಿಲ್ಲುವ ಸ್ಥಳ ಬಿಟ್ಟು ತಮಗೆ ಅನುಕೂಲವಿದ್ದಲ್ಲಿ ಹೆದ್ದಾರಿ ಪ್ರಾಧಿಕಾರ ಬಸ್ ತಂಗುದಾಣ ನಿರ್ಮಿಸಿದ್ದು ಪ್ರಯಾಣಿಕರಿಗೆ ಉಪಯೋಗಕ್ಕೆ ಬರುತ್ತಿಲ್ಲ.
ಪ್ರಸ್ತುತ ಬಸ್ ನಿಲ್ಲುವ ಜಾಗ : ಪುತ್ತೂರು, ಉಪ್ಪಿನಂಗಡಿ, ವಿಟ್ಲ ಹಾಗೂ ಸಜಿಪ, ಸಾಲೆತ್ತೂರು ಭಾಗಗಳಿಂದ ಬರುವ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿ-ಇಳಿಸಲು ಮೆಲ್ಕಾರ್‌ನ ಸರ್ವೀಸ್ ರಸ್ತೆಯ ಸಾರಾ ಆರ್ಕೇಡ್ ಮುಂಭಾಗದಲ್ಲೇ ನಿಲ್ಲುತ್ತವೆ. ಚತುಷ್ಪಥ ಹೆದ್ದಾರಿಯಾಗುವ ಮೊದಲಿನಿಂದಲೂ ಇದ್ದ ಈ ವ್ಯವಸ್ಥೆ ಈಗಲೂ ಮುಂದುವರಿದಿದೆ. ಆದರೆ, ಇಲ್ಲಿ ಪ್ರಯಾಣಿಕರಿಗೆ ಯಾವುದೇ ತಂಗುದಾಣ ವ್ಯವಸ್ಥೆ ಇಲ್ಲ. ಬಿಸಿಲು-ಮಳೆಯನ್ನು ಲೆಕ್ಕಿಸದೆ ಪ್ರಯಾಣಿಕರು ಫುಟ್‌ಪಾತ್ ಮೇಲೆಯೇ ನಿಂತು ಬಸ್ಸಿಗಾಗಿ ಕಾಯಬೇಕಾದ ಅನಿವಾರ್ಯತೆ ಇದೆ.
100 ಮೀಟರ್ ದೂರದಲ್ಲಿ ಬೋರ್ಡ್: ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಪ್ರಾಧಿಕಾರ ಸಾರಾ ಆರ್ಕೇಡ್‌ನಿಂದ ಸುಮಾರು 100 ಮೀಟರ್ ದೂರದಲ್ಲಿ ‘ಬಸ್ ಸ್ಟಾಪ್’ ಎಂಬ ಸಣ್ಣ ಸೂಚನಾ ಫಲಕ ಅಳವಡಿಸಿದೆ. ಇದು ಪ್ರಯಾಣಿಕರು ಹಾಗೂ ಬಸ್ ಚಾಲಕರಿಗೆ ಕಾಣಿಸುವುದಿಲ್ಲ.
200 ಮೀಟರ್ ದೂರದಲ್ಲಿ ತಂಗುದಾಣ: ಇನ್ನು ಈ ಸೂಚನಾ ಫಲಕದಿಂದ ಸುಮಾರು 200 ಮೀಟರ್ ದೂರದಲ್ಲಿ ಆಲಡ್ಕ ರಸ್ತೆಯ ಪಕ್ಕದಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿಗೆ ಪ್ರಯಾಣಿಕರೂ ಹೋಗುತ್ತಿಲ್ಲ, ಬಸ್ಸುಗಳೂ ನಿಲ್ಲುತ್ತಿಲ್ಲ. ಹೆದ್ದಾರಿಯಲ್ಲಿರುವ ಬಸ್ ತಂಗುದಾಣದ ಅವ್ಯವಸ್ಥೆ ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿದೆ. ಮೆಲ್ಕಾರ್‌ನ ಇನ್ನೊಂದು ಭಾಗದಲ್ಲಿ ಪ್ರಯಾಣಿಕರು ನಿಲ್ಲುವ ಜಾಗದಲ್ಲೇ ತಂಗುದಾಣ ನಿರ್ಮಿಸಲಾಗಿದೆ. ಇಂಥ ಅವೈಜ್ಞಾನಿಕ ಯೋಜನೆ ಇಲ್ಲಿ ಯಾಕೆ ರೂಪಿಸಲಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಅಗಲ ಕಿರಿದಾದ ಜಾಗ

ಮೆಲ್ಕಾರ್‌ನಲ್ಲಿ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಜಾಗ ತುಂಬಾ ಇಕ್ಕಟ್ಟಾಗಿದ್ದು, ಕಿರಿದಾದ ರಸ್ತೆಯಲ್ಲಿ ಏಕಕಾಲಕ್ಕೆ ಎರಡೂ-ಮೂರು ಬಸ್ಸುಗಳು ಬಂದು ನಿಂತರೆ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದೇ ಸ್ಥಳದಲ್ಲಿ ಸಜಿಪ, ಪಣೋಲಿಬೈಲು, ಮಾರ್ನಬೈಲ್ ಭಾಗದಿಂದ ಬರುವ ವಾಹನಗಳು ತಿರುವು ಪಡೆದುಕೊಳ್ಳುತ್ತವೆ. ಅಲ್ಲದೆ ಆಲಡ್ಕ ಭಾಗದಿಂದ ವಿರುದ್ಧ ದಿಕ್ಕಿನಲ್ಲಿ ಅನೇಕ ವಾಹನಗಳು ಮೆಲ್ಕಾರ್ ಕಡೆಗೆ ಬರುವುದರಿಂದ ಈ ಪ್ರದೇಶ ಯಾವಾಗಲೂ ವಾಹನಗಳ ಜಂಜಾಟದಿಂದ ಕೂಡಿರುತ್ತದೆ. ಆದ್ದರಿಂದ ಈಗ ಇರುವ ಬಸ್ ತಂಗುದಾಣ ಬದಲು ಪ್ರಯಾಣಿಕರಿಗೆ ಅನುಕೂಲಕರವಾದ ಸ್ಥಳಗಳಲ್ಲಿ ತಂಗುದಾಣ ನಿರ್ಮಿಸಬೇಕು ಎಂದು ಸ್ಥಳೀಯರು, ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಮೆಲ್ಕಾರ್‌ನಲ್ಲಿ ಅಂಡರ್ ಪಾಸ್ ನಿರ್ವಾಣಗೊಂಡ ಬಳಿಕ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಪ್ರಯಾಣಿಕರು ಹಾಗೂ ಬಸ್ಸುಗಳು ನಿಲ್ಲುವ ಜಾಗದಲ್ಲಿ ಶೆಲ್ಟರ್ ಇಲ್ಲ. ಶೆಲ್ಟರ್ ಇರುವ ಜಾಗದಲ್ಲಿ ಬಸ್ ನಿಲ್ಲುವುದಿಲ್ಲ. ಅಷ್ಟು ದೂರ ಹೋಗಲು ಪ್ರಯಾಣಿಕರಿಗಂತೂ ಸಾಧ್ಯವಿಲ್ಲ. ಈ ಅವ್ಯವಸ್ಥೆಯನ್ನು ಹೆದ್ದಾರಿ ಪ್ರಾಧಿಕಾರ ಸರಿಪಡಿಸಬೇಕು.

— ಅಶ್ವಥ್, ಸಜೀಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net