ಉಡುಪಿಯ ಕೃಷ್ಣನೂರಲ್ಲಿ 'ಮೋದಿ' ಜಪ

ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಕ್ಕೆ ಉಡುಪಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜರ್ಮನ್​ ತಂತ್ರಜ್ಞಾನದ ಟೆಂಟ್​.
ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಕ್ಕೆ ಉಡುಪಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜರ್ಮನ್​ ತಂತ್ರಜ್ಞಾನದ ಟೆಂಟ್​.
Published on

ಪಿಎಂ ಕಚೇರಿಯಿಂದ ಬಾರದ ಭೇಟಿಯ ಖಚಿತತೆ 

ಪ್ರಶಾಂತ ಭಾಗ್ವತ ಉಡುಪಿ
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯದಲ್ಲಿ ಶ್ರೀಕೃಷ್ಣನ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದು, 'ವಿಶ್ವ ಗೀತಾ' ಪರ್ಯಾಯವಾಗಿ ಆಚರಣೆಯಲ್ಲಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಭಗವದ್ಗೀತೆಯ ಮಹತ್ವ, ಸಂದೇಶ ಸಾರುವ ಮಹತ್ತರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ಈ ಹಿಂದೆ ಕೃಷ್ಣಾಷ್ಟಮಿಯ ನಿಮಿತ್ತ 48 ದಿನಗಳ ಮಂಡಲೋತ್ಸವದ ಮೂಲಕ ಅದ್ದೂರಿಯಾಗಿ ಕೃಷ್ಣನ ಜನ್ಮದಿನವನ್ನು ಆಚರಿಸಿದ್ದರು. ಇದೀಗ ಗೀತಾ ಜಯಂತಿ ನಿಮಿತ್ತ ಒಂದು ತಿಂಗಳ ಕಾಲ 'ಬೃಹತ್​ ಗೀತೋತ್ಸವ' ನಡೆಯುತ್ತಿದೆ. ಪ್ರತಿ ದಿನವೂ ನಾಡಿನ ವಿವಿಧ ಮಠಾಧೀಶರನ್ನು ಆಹ್ವಾನಿಸಿ, ಸಂತ ಸಂದೇಶ-ಸಂತ ಸನ್ಮಾನದ ಮೂಲಕ ಗೀತೆಯ ಮಹತ್ವ ಸಾರುತ್ತಿದ್ದಾರೆ.

ಪ್ರಧಾನಿ ಮೋದಿಗೆ ಆಹ್ವಾನ

ಬೃಹತ್​ ಗೀತೋತ್ಸವದಲ್ಲಿ ನ.28 ರಂದು ಸಾಮೂಹಿಕವಾಗಿ ಲಕ್ಷ ಕಂಠ ಗೀತಾ ಪಾರಾಯಣ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಗೀತೋತ್ಸವದ ಪ್ರಮುಖ ಭಾಗವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಿಸಲಾಗಿದೆ. ಕಾರ್ಯಕ್ರಮಗಳ ಕುರಿತಾಗಿ ಮಠದ ವತಿಯಿಂದ ಎಲ್ಲ ಮಾಹಿತಿ ರವಾನೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ. ಆದರೆ, ಈವರೆಗೂ ಮೋದಿ ಆಗಮಿಸುವ ಕುರಿತು ಜಿಲ್ಲಾಡಳಿತಕ್ಕೂ ಖಚಿತ ಮಾಹಿತಿ ಬಂದಿಲ್ಲ. ಪ್ರಧಾನಿಯ ಭದ್ರತೆ ನೋಡಿಕೊಳ್ಳುವ ಎಸ್​ಪಿಜಿ (ಸ್ಪೆಶಲ್​ ಪ್ರೊಟೆಕ್ಷನ್​ ಗ್ರೂಪ್​) ತಂಡವೂ ಸಹ ಇನ್ನೂ ಉಡುಪಿಗೆ ಆಗಮಿಸಿ ಪರಿಶೀಲನೆ ಮಾಡಿಲ್ಲ. 
ವ್ಯವಸ್ಥಿತ ಬೃಹತ್​ 'ಜರ್ಮನ್​ ಟೆಂಟ್​' ನಿರ್ಮಾಣ
ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಕ್ಕಾಗಿ ಹಾಗೂ ಅವರ ಆಗಮನದ ನಿರೀಕ್ಷೆಯಲ್ಲಿ ಶ್ರೀಕೃಷ್ಣ ಮಠದ ವಾಹನ ಪಾರ್ಕಿಂಗ್​ ಪ್ರದೇಶದ ಸಮೀಪದಲ್ಲಿ ಮೂರು ಎಕರೆ ಖಾಸಗಿ ಜಾಗದಲ್ಲಿ ಬೃಹತ್​ ವೇದಿಕೆ, ಸಭಾಂಗಣ ಹಾಗೂ ಜರ್ಮನ್​ ಟೆಂಟ್​ ನಿರ್ಮಿಸಲಾಗುತ್ತಿದೆ. ಮಳೆ, ಬಿಸಿಲಿನಿಂದ ತೊಡಕಾಗದಂತೆ ಸಮಾರಂಭ ಸುವ್ಯವಸ್ಥಿತವಾಗಿ ನಡೆಯಲು ಬೆಂಗಳೂರಿನ ಶ್ರೀ ನಂಜುಂಡೇಶ್ವರ ಟೆಂಟ್​ ಹೌಸ್​(ಎನ್​ಟಿಎಚ್​) ವತಿಯಿಂದ ಜರ್ಮನ್​ ತಂತ್ರಜ್ಞಾನದಲ್ಲಿ 1.40 ಲಕ್ಷ ಚದರ್​ ಅಡಿಯಲ್ಲಿ ನಾಲ್ಕು ಟೆಂಟ್​ ಅಳವಡಿಸಲಾಗುತ್ತಿದೆ. 2 ಸಾವಿರದಷ್ಟು ವಿವಿಐಪಿ ಆಸನ ವ್ಯವಸ್ಥೆ, ಎಂಟು ಕಡೆಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಕಲ್ಪಿಸಲಾಗಿದೆ. 75 ಸಿಸಿ ಕ್ಯಾಮರಾ, ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ 60 ಅಡಿ ಅಂತರದಲ್ಲಿ 15 ಎಲ್​ಇಡಿ ವಾಲ್​ ಅಳವಡಿಕೆಯಾಗಲಿದೆ. ಮುಖ್ಯ ವೇದಿಕೆ 2,400 ಚದರ್​ ಅಡಿ, 100 ಫ್ಯಾನ್​ ಅಳವಡಿಸಿದ್ದು, ಸಭಿಕರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ನೆಲದಲ್ಲಿ ಕುಳಿತು ಲಕ್ಷ ಕಂಠ ಗೀತಾ ಪಠಣ ನಡೆಯಲಿದೆ. 60 ಸಾವಿರ ಚದರ್​ ಅಡಿಯ ಫ್ಲ್ಯಾಟ್ ಫಾರ್ಮ್ ಸಜ್ಜುಗೊಳ್ಳುತ್ತಿದ್ದು, ವೇದಿಕೆಯ ಹಿಂಬದಿಯಲ್ಲಿ ಪಾರ್ಥಸಾರಥಿ (ಕೃಷ್ಣ)ಯ ಬೃಹತ್​ ಮೂರ್ತಿಯೂ ಇರಲಿದೆ ಎಂದು ಟೆಂಟ್​ ಹೌಸ್​ ಮಾಲೀಕ ಮಹೇಶ್​ ಮಾಹಿತಿ ನೀಡಿದ್ದಾರೆ.
"

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಗವದ್ಗೀತೆಯ ಮೇಲೆ ಅಪಾರ ವಿಶ್ವಾಸವಿದೆ. ಗೀತೆಯ ಸಾರದಂತೆಯೇ ಅವರು ಆಡಳಿತವನ್ನೂ ನಡೆಸುತ್ತಿದ್ದಾರೆ. ಗೀತೆಯ ತತ್ವ ಅನುಸರಣೆಯಿಂದ ದೇಶಕ್ಕೂ ಹಿತ ಎನ್ನುವ ಸತ್ಯದ ಅರಿವೂ ಸಹ ಅವರಿಗಿದೆ. ಹೀಗಾಗಿ ಶ್ರೀಕೃಷ್ಣನ ಸನ್ನಿಧಿ ಇರುವ ಉಡುಪಿಯಲ್ಲಿ ಆಯೋಜಿಸಿರುವ ಲಕ್ಷ ಕಂಠ ಗೀತಾ ಪಠಣದಲ್ಲಿ ಪಾಲ್ಗೊಂಡು ಅವರೂ ಸಹ 15ನೇ ಅಧ್ಯಾಯ ಪಠಿಸಲಿದ್ದಾರೆ. ಪ್ರಧಾನಿ ಮೋದಿ ಬರುವ ವಿಶ್ವಾಸ ನಮಗಿದೆ.

ರೋಡ್​ ಶೋ ಸಾಧ್ಯತೆ
ಪ್ರಧಾನಿ ಮೋದಿ ಅವರನ್ನು ರೋಡ್​ ಶೋ ಮೂಲಕ ಶ್ರೀಕೃಷ್ಣ ಮಠಕ್ಕೆ ಕರೆತರಲು ಜಿಲ್ಲಾ ಬಿಜೆಪಿಯೂ ಸಹ ಚಿಂತಿಸಿದೆ. ಅದಕ್ಕಾಗಿ ರಾಜ್ಯಾಧ್ಯಕ್ಷ ಬಿ.ವೈ, ವಿಜಯೇಂದ್ರ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ ಸಭೆಯನ್ನೂ ನಡೆಸಲಾಗಿದೆ. ಜಿಲ್ಲೆಯಿಂದ 50 ಸಾವಿರಕ್ಕೂ ಅಧಿಕ ಬಿಜೆಪಿಯ ಕಾರ್ಯಕರ್ತರನ್ನು ರೋಡ್​ ಶೋಗೆ ಸೇರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಭದ್ರತೆಗಾಗಿ 1,600ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಯ ಅಗತ್ಯಯೆ ಇದ್ದು, ಬನ್ನಂಜೆಯಿಂದ ಕಲ್ಸಂಕ ತನಕ ನಡೆಸಲು ಉದ್ದೇಶಿಸಿರುವ 'ರೋಡ್​ ಶೋ' ಸಹ ಇನ್ನೂ ಖಚಿತವಾಗಿಲ್ಲ.
"

ದೆಹಲಿಯ ಪಿಎಂ ಕಚೇರಿಯಿಂದ ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮಗಳ ಸ್ವರೂಪ, ಸಿದ್ಧತೆ ಹಾಗೂ ಭದ್ರತೆ ಕುರಿತಂತೆ ಮಾಹಿತಿ ಕೇಳಿದ್ದು ಜಿಲ್ಲಾಡಳಿತದಿಂದ ವಾರದ ಹಿಂದೆಯೇ ವರದಿ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಸಹ ಕೇಂದ್ರ ಸರ್ಕಾರದಿಂದ ಅಥವಾ ವಿಶೇಷ ಭದ್ರತಾ ಪಡೆ (ಎಸ್​ಪಿಜಿ)ಯಿಂದ ಪ್ರಧಾನಿ ಉಡುಪಿ ಭೇಟಿ ಖಚಿತತೆ ಕುರಿತಂತೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. ನಿರೀಕ್ಷೆಯಲ್ಲಿದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net