

ಉಡುಪಿ: ಇದು ಕೇವಲ ಪ್ರತಿಭಟನೆಯಲ್ಲ, ಪ್ರಜಾಪ್ರಭುತ್ವದ ಆತ್ಮ ರಕ್ಷಿಸುವ ಹೋರಾಟ. ದೇಶದಲ್ಲಿಂದು ಗೋಡ್ಸೆಯ ಸಿದ್ಧಾಂತ ಹಾಗೂ ಗಾಂಧಿಯ ಸಿದ್ಧಾಂತ ನಡುವೆ ಹೋರಾಟ ನಡೆಯುತ್ತಿದೆ. ದೆಹಲಿ ಬಂದ್ ಮತ್ತು ಮುಸೊಲೋನಿ, ಹಿಟ್ಲರ್, ಗೋಡ್ಸೆ ಮಾರ್ಗ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ಸ್ವಾತಂತ್ರ್ಯದ ನಿಜಾರ್ಥಕ್ಕೆ ಧಕ್ಕೆ ತರುತ್ತಿದೆ. ಕೂಡಲೇ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಮುಖಂಡ ನಿಹಾಲ್ ಕಿದಿಯೂರು ಆಗ್ರಹಿಸಿದರು.
ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ, ದೆಹಲಿಯಲ್ಲಿ ಪ್ರತಿಭಟನೆ ವೇಳೆ ವಶಕ್ಕೆ ಪಡೆದಿರುವ ಪ್ರತಿಭಟನಾಕಾರರ ಬಿಡುಗಡೆಗೆ ಆಗ್ರಹಿಸಿ ಉಡುಪಿಯ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಸಾಲಿಡಾರಿಟಿ ಉಡುಪಿ ವತಿಯಿಂದ ಶನಿವಾರ (ಅ.10) ಸಂಜೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಮೃತ್ ಶೆಣೈ ಮಾತನಾಡಿ, ಚುನಾವಣಾ ಆಯೋಗ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಎಸ್ಐಆರ್ ಮೂಲಕ ಅಕ್ರಮವೆಸಗುವ ಮೂಲಕ ಅಸಂವಿಧಾನಿಕವಾಗಿ ವರ್ತಿಸುತ್ತಿದೆ ಎಂದರು.
ಸುಂದರ್ ಮಾಸ್ತರ್ ಮಾತನಾಡಿ, ಹಿಂದೂ-ಮುಸ್ಲಿಮ್ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಜ್ಞಾನೇಶ್ ಕುಮಾರ್ ಚುನಾವಣಾ ವ್ಯವಸ್ಥೆಗೆ ದ್ರೋಹ ಎಸಗಿರುವುದು ಸಾಬೀತಾಗಿದೆ. ಅವರು ಕೂಡಲೇ ರಾಜೀನಾಮೆ ಕೊಟ್ಟು ತೊಲಗಬೇಕು ಎಂದರು.
ಮುಖಂಡ ಇದ್ರೀಸ್ ಹೂಡೆ ಮಾತನಾಡಿದರು. ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ಅಲ್ಪಸಂಖ್ಯಾತ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಅಂಬ್ಲೈರ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷ ಸಯೀದ್ ಫರೀದ್, ಮಂಜುನಾಥ್ ಗಿಳಿಯಾರು, ಶ್ಯಾಮ್ರಾಜ್ ರ್ಬಿತಿ, ಕುಲ್ಸುಮ್ ಅಬೂಬಕ್ಕರ್, ಅಬ್ದುಲ್ ಅಝೀಜ್ ಉದ್ಯಾವರ, ಎಸ್ಐಒನ ನಿಫಾಲ್ ಕಿದಿಯೂರು, ನಿಸಾರ್ ಇತರರು ಉಪಸ್ಥಿತರಿದ್ದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರ್ವಹಿಸಿದರು.