ಉಡುಪಿಯಲ್ಲಿ ಮಾನ್​ ಧನ್​ 'ಪಿಂಚಣಿ' ಅಭಿಯಾನ

ಶ್ರಮದಾಯಕ ಕೆಲಸದಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರು. (ಸಾಂದರ್ಭಿಕ ಚಿತ್ರ)
ಶ್ರಮದಾಯಕ ಕೆಲಸದಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರು. (ಸಾಂದರ್ಭಿಕ ಚಿತ್ರ)
Published on

* ಅಸಂಘಟಿತ ಕಾರ್ಮಿಕರಿಗೆ ವರದಾನ

* ಹೆಸರು ನೋಂದಣಿಗೆ ಅರ್ಹರಿಗೆ ಆಹ್ವಾನ

ಉಡುಪಿ: ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ 'ಮಾನ್​ ಧನ್​' ಯೋಜನೆ ಹಾಗೂ 'ಎನ್​ಪಿಎಸ್​ ಟ್ರೇಡರ್ಸ್​' ಎಂಬ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆ ಜಾರಿಗೊಳಿಸಿದೆ.
ಎಲ್ಲ ವರ್ಗದ ಅಸಂಘಟಿತರು ಕೇಂದ್ರ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಹಾಗೂ ಹೆಸರು ನೋಂದಾಯಿಸಲು ಜಿಲ್ಲಾಡಳಿತದಿಂದ ಜಿಲ್ಲಾದ್ಯಂತ ಅಭಿಯಾನ ಆರಂಭಗೊಂಡಿದೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್​ ಧನ್​ ಯೋಜನೆ ನೋಂದಾವಣಿಗೆ ಜ.15ರಿಂದಲೇ  ಅಭಿಯಾನ ಆರಂಭಗೊಂಡಿದ್ದು, ಮಾ.15ರ ವರೆಗೆ ನಡೆಯಲಿದೆ.

ತಿಂಗಳಿಗೆ 3 ಸಾವಿರ ರೂ. ಪಿಂಚಣಿ

ವಯಸ್ಸಿಗೆ ಅನುಗುಣವಾಗಿ ಮಾಸಿಕ 55 ರೂ.ನಿಂದ 200ರೂ. ವರೆಗೆ ಹಣ ಪಾವತಿಸಿದ್ದಲ್ಲಿ 60 ವರ್ಷದ ನಂತರ ಪ್ರತಿ ತಿಂಗಳಿಗೆ 3 ಸಾವಿರ ರೂ. ಪಿಂಚಣಿ ಸೌಲಭ್ಯ ಪಡೆಯಬಹುದು. ಆದಾಯ ತೆರಿಗೆ ಪಾವತಿದಾರರು, ಇಎಸ್​ಐ, ಇಪಿಎಫ್​, ಎನ್​ಪಿಎಸ್​ ಯೋಜನೆಯ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಲಭಿಸದು. 18ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಆಧಾರ್​ ಕಾರ್ಡ್​, ಆಧಾರ್​ಗೆ ಲಿಂಕ್​ ಆಗಿರುವ ಮೊಬೈಲ್​ ಪೋನ್​ ಸಂಖ್ಯೆ, ಬ್ಯಾಂಕ್​ ಪಾಸ್​ಬುಕ್​ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಬಹುದಾಗಿದೆ.

ಜಿಲ್ಲೆಯಲ್ಲಿ 7,275 ಜನರ ಗುರಿ

ಯೋಜನೆಯಡಿ ಜಿಲ್ಲೆಯಲ್ಲಿ 7,275 ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ಗುರಿ ನಿಗದಿಪಡಿಸಲಾಗಿದೆ. ನರೇಗಾ ಕಾರ್ಮಿಕರು, ಎಸ್​ಎಚ್​ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮನೆ ಕೆಲಸದವರು, ಮೀನುಗಾರರೂ ಸೇರಿದಂತೆ ಇನ್ನಿತರ ಅಸಂಘಟಿತ ಕಾರ್ಮಿಕರಿಗೆ ಯೋಜನೆಯ ಪ್ರಯೋಜನ ಪಡೆಯುವಂತಾಗಲು ಜಿಲ್ಲೆಯಲ್ಲಿ ಅಭಿಯಾನ ಕೈಗೊಳ್ಳಲಾಗಿದೆ.

ವಂತಿಕೆ ಪಾವತಿ ಮಾಹಿತಿ

ಚಂದಾದಾರರು 10 ವರ್ಷದ ಒಳಗೆ ಯೋಜನೆಯಿಂದ ನಿರ್ಗಮಿಸಿದರೆ ಪಾವತಿಸಿದ ವಂತಿಕೆ ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುವುದು. 10 ವರ್ಷಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದರೆ ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಗಳಲ್ಲಿ ಯಾವ ಮೊತ್ತ ಹೆಚ್ಚಿರುತ್ತದೋ ಅದನ್ನು ಪಾವತಿಸಲಾಗುತ್ತದೆ. ಫಲಾನುಭವಿ ನಿರಂತರವಾಗಿ ವಂತಿಕೆ ಪಾವತಿಸುತ್ತಿದ್ದು, 60 ವರ್ಷದೊಳಗೆ ಮೃತಪಟ್ಟರೆ ಅಥವಾ ಶಾಶ್ವತ ಅಂಗ ನ್ಯೂನತೆಯಿಂದ ವಂತಿಕೆ ಪಾವತಿಸಲು ಆಗದಿದ್ದರೆ ಫಲಾನುಭವಿಯ ಪತ್ನಿ ಯೋಜನೆಯಡಿ ಸೇರಲು ಅವಕಾಶವಿದ್ದು, ಯೋಜನೆ ಮುಂದುವರಿಸಬಹುದು.

ಅಧಿಕಾರಿಗಳೊಂದಿಗೆ ಡಿಸಿ ಸ್ವರೂಪಾ ಸಭೆ

ಕೇಂದ್ರ ಸರ್ಕಾರದ ಈ ಯೋಜನೆ ಅರ್ಹ ಲಾನುಭವಿಗಳಿಗೆ ಲಭಿಸುವಂತಾಗಲು ಉಡುಪಿಯ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ತಮ್ಮ ಕಚೇರಿಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದರು. ಹೆಚ್ಚು ಅಸಂಘಟಿತ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ, ಕಾರ್ಮಿಕರು ಸೇರುವಂತಹ ವಿವಿಧ ಸಮಾರಂಭಗಳಲ್ಲಿ ಶಿಬಿರ ಆಯೋಜಿಸಿ, ಯೋಜನೆಯ ಕುರಿತು ಅರಿವು ಮೂಡಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೋಂದಾಯಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್​ ಷಾ ಅಲ್ತಾಫ್​ ಅಹಮದ್​, ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್​ ವಿ. ನಾಯಕ್​ ಇತರರಿದ್ದರು.
"

ಕೇಂದ್ರ ಸರ್ಕಾರದ ಈ ಎರಡೂ ಪಿಂಚಣಿ ಯೋಜನೆಗಳು ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಹಕಾರಿಯಾಗಲಿದೆ. ಜಿಲ್ಲಾದ್ಯಂತ ಅಭಿಯಾನ ಆರಂಭಗೊಂಡಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಶು ಸಖಿಯರು, ಕೃಷಿ ಸಖಿಯರು ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net