ಹಿಂದುತ್ವವಾದಿಗಳ ದನಿ ಹತ್ತಿಕ್ಕಲು ಕೈ ಸರ್ಕಾರ ಸಂಚು

ಉಡುಪಿ ಬಿಜೆಪಿ ಶಾಸಕ ಯಶ್​ಪಾಲ್​ ಸುವರ್ಣ.
ಉಡುಪಿ ಬಿಜೆಪಿ ಶಾಸಕ ಯಶ್​ಪಾಲ್​ ಸುವರ್ಣ.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ 

* ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ಕೇಸ್​ಗೆ ಖಂಡನೆ

ಉಡುಪಿ: ರಾಜ್ಯ ಕಾಂಗ್ರೆಸ್​ ಸರ್ಕಾರದ ಗೃಹ ಇಲಾಖೆಯು ಅಲ್ಪಸಂಖ್ಯಾತರ ತುಷ್ಟೀಕರಣ ಇಲಾಖೆಯಾಗಿ ಪರಿವರ್ತನೆಯಾಗಿದೆ. ಮತೀಯವಾದಿ ಶಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ನೋಟಿಸ್​ ನೀಡಿದೆ. ತನ್ಮೂಲಕ ರಾಜ್ಯದ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ರಾಜ್ಯ ಸರ್ಕಾರ ಸಂಚು ಮಾಡುತ್ತಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಅವರು ದಿನಬೆಳಗಾದರೆ ಆರ್​ಎಸ್​ಎಸ್​ ವಿರುದ್ಧ ಹೇಳಿಕೆ ನೀಡುವುದನ್ನೇ ದಿನಚರಿಯಾಗಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ನೀಟ್​ ಪರೀಕ್ಷೆ ನೆಪದಲ್ಲಿ ವಿದ್ಯಾರ್ಥಿಗಳ ಮುಖವಾಡ ಧರಿಸಿ ಪ್ರತಿಭಟಿಸುತ್ತಿದ್ದಾರೆ. ಉಗ್ರರಪರ ಜೈಕಾರ ಹಾಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಳ್ಳದ ಪ್ರಿಯಾಂಕ್​ ಖರ್ಗೆ, ದುಷ್ಟ ಶಕ್ತಿಗಳ ವಿರುದ್ಧ ಮಾತನಾಡಿದ್ದಕ್ಕೆ ಸಿ.ಟಿ. ರವಿ ವಿರುದ್ಧ ಎಫ್ಐಆರ್​ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆ ಕುರಿತು ಯಾವುದೇ ಕಠಿಣ ಕ್ರಮವಹಿಸದ ಸಚಿವ ಪ್ರಿಯಾಂಕ್​ ಖರ್ಗೆ, ಮತೀಯ ಶಕ್ತಿಗಳ ಓಲೈಕೆಯಲ್ಲಿ ನಿರತರಾಗಿದ್ದಾರೆ. 'ವಿನಾಶಕಾಲೇ ವಿಪರೀತ ಬುದ್ಧಿ' ಎಂಬಂತೆ ರಾಜ್ಯ ಸರ್ಕಾರ ಹದ್ದುಮೀರಿ ವರ್ತಿಸುತ್ತಿದೆ. ಹಿಂದುತ್ವ ಮತ್ತು ರಾಷ್ಟ್ರೀಯ ವಿಚಾರಧಾರೆಯ ವಿಷಯದಲ್ಲಿ ಬಿಜೆಪಿ ನಾಯಕರ ಮನಸ್ಥಿತಿ ಕುಗ್ಗಿಸಲು ಕೈ ಸರ್ಕಾರದಿಂದ ಸಾಧ್ಯವಿಲ್ಲ. ರಾಷ್ಟ್ರೀಯವಾದ ಚಿಂತನೆಯ ಸಿ.ಟಿ. ರವಿ ಅವರಿಗೆ ರಾಜ್ಯದ ಜನರ ಬೆಂಬಲ ಸದಾ ಇರಲಿದೆ. ಇವರ ನೋಟಿಸ್​, ಕೇಸ್​ಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ ಎಂದು ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net