ಕಾಸರಗೋಡು: ರಾಣಿಪುರಂ ರಸ್ತೆಯ ನೆಲ್ಲಿತ್ತೋಡ್ ಭಾಗದಲ್ಲಿ ಎರಡು ಪ್ರತ್ಯೇಕ ಅಪಘಾತದಲ್ಲಿ ಕಾರುಗಳು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅರ್ಧ ಗಂಟೆಯ ಅಂತರದಲ್ಲಿ ಎರಡು ಅಪಘಾತ ಸಂಭವಿಸಿದೆ.
ಕಾಞಂಗಾಡಿನ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಇದಾದ ಅರ್ಧ ಗಂಟೆ ಬಳಿಕ ಅರ್ಧ ಕಿ.ಮೀ. ದೂರದಲ್ಲಿ ಕರ್ನಾಟಕ ನೋಂದಣಿಯ ಎರ್ಟಿಗಾ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ರಸ್ತೆಗೆ ಪಲ್ಟಿಯಾಗಿದೆ.
ಎರಡೂ ಕಾರುಗಳು ಸಂಪೂರ್ಣ ಹಾನಿಗೊಂಡಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ರಾಜಾಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.