ಮಲ್ಪೆಯಲ್ಲಿ ನಾರ್ವೆ ವಿಲ್ಸನ್ ಸಂಸ್ಥೆಗಾಗಿ ನಿರ್ಮಿಸಿದ ಸರಕು ಹಡಗು ಲೋಕಾರ್ಪಣೆ

ಮಲ್ಪೆಯ ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ (ಯುಸಿಎಸ್​ಎಲ್​) ಘಟಕದಲ್ಲಿ ನಾರ್ವೆಯ ವಿಲ್ಸನ್​ ಎಎಸ್​ಎ ಸಂಸ್ಥೆಗಾಗಿ ನಿರ್ಮಿಸಲಾಗುತ್ತಿರುವ ಎಂಟು ಸರಕು ಹಡಗುಗಳ ಪೈಕಿ ಮೊದಲ 6,300 ಡಿಡಬ್ಲ್ಯುಟಿ ಸಾಮರ್ಥ್ಯದ ಹಡಗಿನ ಲೋಕಾರ್ಪಣೆ
Cargo ship launch
ಮಲ್ಪೆಯ ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ (ಯುಸಿಎಸ್​ಎಲ್​) ಘಟಕದಲ್ಲಿ ನಾರ್ವೆಯ ವಿಲ್ಸನ್​ ಎಎಸ್​ಎ ಸಂಸ್ಥೆಗಾಗಿ ನಿರ್ಮಿಸಿದ 6,300 ಡಿಡಬ್ಲ್ಯುಟಿ ಸಾಮರ್ಥ್ಯದ ಹಡಗಿನ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
Published on: 

ಉಡುಪಿ: ಭಾರತ ಮತ್ತು ನಾರ್ವೆ ನಡುವಿನ ದ್ವಿಪಕ್ಷೀಯ ಹಾಗೂ ಕಡಲ ವಾಣಿಜ್ಯ ಸಹಕಾರವು ಮತ್ತಫಿ್ಟು ಎತ್ತರಕ್ಕೇರಿದೆ. ಕೊಚಿನ್​ ಶಿಪಿಯಾರ್ಡ್​ ನಾರ್ವೆ ದೇಶದೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತಿದ್ದು, ಪೂರ್ವ ಹಾಗೂ ಪಶ್ಚಿಮ ಯುರೋಪ್​ಗೆ ಸಾಕಷ್ಟು ಹಡಗುಗಳನ್ನು ಯಶಸ್ವಿಯಾಗಿ ತಲುಪಿಸಿದೆ. ಉಡುಪಿಯಲ್ಲಿ ನಿರ್ಮಾಣಗೊಂಡ ಅತ್ಯಂತ ಗರಿಷ್ಠ ಗಾತ್ರದ ಹಡಗು ಇದಾಗಿರುವುದರಿಂದ ಉಡುಪಿ ಮ್ಯಾಕ್ಸ್​ ಎಂದು ಕರೆಯಲಾಗಿದೆ. ಭಾರತೀಯ ಹಡಗು ನಿಮಾರ್ಣ ರಂಗದಲ್ಲಿ ಹೆಮ್ಮೆಯ ವಿಷಯ ಎಂದು ಉಡುಪಿ ಕೊಚಿನ್​ ಶಿಪಿಯಾರ್ಡ್​ ಸಿಇಒ ಹರಿಕುಮಾರ್​ ಹೇಳಿದರು.

ಮಲ್ಪೆಯ ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್​ (ಯುಸಿಎಸ್​ಎಲ್​) ಘಟಕದಲ್ಲಿ ನಾರ್ವೆಯ ವಿಲ್ಸನ್​ ಎಎಸ್​ಎ ಸಂಸ್ಥೆಗಾಗಿ ನಿರ್ಮಿಸಲಾಗುತ್ತಿರುವ ಎಂಟು ಸರಕು ಹಡಗುಗಳ ಪೈಕಿ ಮೊದಲ 6,300 ಡಿಡಬ್ಲ್ಯುಟಿ ಸಾಮರ್ಥ್ಯದ ಹಡಗಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾರ್ವೆಯ ಭಾರತ ರಾಯಭಾರಿ ಮೇ-ಎಲಿನ್​ ಸ್ಟೆನರ್​ ಮೂರನೇ ಹಡಗಿನ ಕೀಲ್​ ಲೇಯಿಂಗ್​ ನೆರವೇರಿಸಿ ಮಾತನಾಡಿ, ಭಾರತ ಮತ್ತು ಇಎಫ್​ಟಿಎ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದವು ಜಾರಿಗೆ ಬಂದು ಮೂರು ವಾರ ಕಳೆದಿರುವ ಈ ಸಂದರ್ಭದಲ್ಲಿ ಹಡಗನ್ನು ಪಡೆಯುತ್ತಿರುವುದು ಸಂತಸ ತಂದಿದೆ. ಪ್ರಸ್ತುತ ಭಾರತದಲ್ಲಿ 160ಕ್ಕೂ ಹೆಚ್ಚು ನಾರ್ವೆ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಸುಮಾರು ಶೇಕಡಾ 70ರಷ್ಟು ಸಂಸ್ಥೆಗಳು ಕಡಲ ವಲಯದಲ್ಲಿವೆ. ಇದು ನಾರ್ವೆ-ಭಾರತ ಆರ್ಥಿಕ ಪಾಲುದಾರಿಕೆಯಾಗಿದ್ದು, ಮೀನುಗಾರಿಕೆ ಹಾಗೂ ಹಡಗು ನಿಮಾರ್ಣ ಕ್ಷೇತ್ರಗಳಲ್ಲಿ ದೀರ್ಘಕಾಲಿಕ ನಂಟು ಮುಂದುವರಿದಿದೆ ಎಂದರು.

ನಾರ್ವೆ ದೇಶವು ಗಾತ್ರದಲ್ಲಿ ಚಿಕ್ಕದಾಗಿದ್ದರೂ ನಮ್ಮ ವಿಶೇಷ ಆರ್ಥಿಕ ವಲಯದ ಸಮುದ್ರ ತೀರ ಭಾರತದಷೆ್ಟೇ ದೊಡ್ಡದಾಗಿದೆ. ಹೀಗಾಗಿ ನಾರ್ವೆಗೆ ಕಡಲ ಕ್ಷೇತ್ರದಲ್ಲಿ ಶತಶತಮಾನಗಳ ಪರಿಣತಿಯಿದ್ದು, ಭಾರತದ ಬೃಹತ್​ ಮಾರುಕಟ್ಟೆ ಹಾಗೂ ಪ್ರಮಾಣದೊಂದಿಗೆ ಇದು ಅತ್ಯುತ್ತಮ ಕೊಂಡಿಯಾಗಿದೆ ಎಂದು ಬಣ್ಣಿಸಿದರು.

ವಿಲ್ಸನ್​ ಎಎಸ್​ಎ ಅಧ್ಯಕ್ಷ ಐವಿಂದ್​ ಐಡೆಸ್ವಿಕ್​ ಹಾಗೂ ಅವರ ಪುತ್ರಿ ಅನ್ನಾ ಐಡೆಸ್ವಿಕ್​ ಅವರು ಮೊದಲ ಹಡಗಿನ ಲೋಕಾರ್ಪಣೆ ನೆರವೇರಿಸಿದರು. ಕೇಂದ್ರ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್​ ಕುಮಾರ್​ ವಿಡಿಯೊ ಕಾನ್ಫರೆನ್ಸ್​ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಾರ್ವೆ ರಾಯಭಾರ ಕಚೇರಿಯ ದ್ವೀತಿಯ ಕಾರ್ಯದರ್ಶಿ ಹೈನ್​ ಟಾಫ್ಟ್​ ನೋರ್ಡಾಲ್​, ಇನ್ನೋವೇಶನ್​ ನಾರ್ವೆಯ ಬ್ಜೋರ್ನ್​ ಐವರ್ಸೆನ್​, ನ್ಯೂ ಮಂಗಳೂರು ಪೋರ್ಟ್​ ಅಥೋರಿಟಿಯ ಉಪ ಅಧ್ಯಕ್ಷೆ ಎಸ್​. ಶಾಂತಿ, ಶಿಪ್ಪಿಂಗ್​ ನಿರ್ದೇಶನಾಲಯದ ಮುಖ್ಯ ಹಡಗು ಸರ್ವೇಯರ್​ ಪ್ರದಿಪ್​ ಸುಧಾಕರ್​, ಕೊಚ್ಚಿನ್​ ಶಿಪ್ಯಾರ್ಡ್​ ಲಿಮಿಟೆಡ್​ನ ಕಾರ್ಯಾಚರಣೆ ನಿರ್ದೇಶಕ ಡಾ. ಎಸ್​. ಹರಿಕೃಷ್ಣನ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net