ಪ್ರೇಮಿಗಳ ಜಗಳದಲ್ಲಿ ಕಾರಿನ ಕೀ ಚರಂಡಿಪಾಲು!

car key
car key
Published on
ಕಡಬ(ದ.ಕ.): ಪ್ರೇಮಿಗಳ ನಡುವೆ ಸಣ್ಣ ವಿಷಯಕ್ಕೆ ಶುರುವಾದ ಜಗಳವೊಂದು ಕಾರಿನ ಕೀ ಚರಂಡಿ ಸೇರುವಂತೆ ಮಾಡಿದ್ದು, ಕೀ ಹುಡುಕಿ ಯುವಕ ಬಸವಳಿದ ಘಟನೆ ಕಡಬದ ಸಂತೆಕಟ್ಟೆ ಬಳಿ ನಡೆದಿದೆ.
ಈಶ್ವರಮಂಗಲ ಮೂಲದ ಯುವಕನೊಬ್ಬ ತನ್ನ ಸ್ನೇಹಿತನ ಕಾರಿನಲ್ಲಿ ಕಡಬಕ್ಕೆ ಆಗಮಿಸಿದ್ದನು. ಸಂತೇಕಟ್ಟೆ ಸಮೀಪದ ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರೇಯಸಿಗೆ ಜನ್ಮದಿನದ ಶುಭಾಶಯ ತಿಳಿಸಲು ಆತ ಕಚೇರಿಯ ಮೊದಲ ಮಹಡಿಗೆ ತೆರಳಿದ್ದನು. ಈ ವೇಳೆ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ಶುರುವಾಗಿದೆ.
ಮಾತಿಗೆ ಮಾತು ಬೆಳೆದು ಕೋಪಗೊಂಡ ಯುವತಿ, ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದು ಮೊದಲ ಮಹಡಿಯಿಂದಲೇ ಕೆಳಗಿನ ಚರಂಡಿಗೆ ಎಸೆದಿದ್ದಾಳೆ. ಕೀ ಕೊಳಚೆ ನೀರು ಮತ್ತು ಹೂಳು ತುಂಬಿದ್ದ ಚರಂಡಿಗೆ ಬಿದ್ದು ಕಾಣೆಯಾಗಿದೆ.

ಸ್ಥಳೀಯರ ನೆರವು

ಕಾರು ತೆಗೆಯಲಾಗದೆ ಫಜೀತಿಗೆ ಸಿಲುಕಿದ ಯುವಕ ಕೀ ಹುಡುಕಾಡಲು ಆರಂಭಿಸಿದ್ದಾನೆ. ಜನನಿಬಿಡ ಪ್ರದೇಶದಲ್ಲಿ ಚರಂಡಿಯೊಳಗೆ ಕೀ ಹುಡುಕುತ್ತಿರುವ ದೃಶ್ಯವನ್ನು ಕಂಡ ಸಾರ್ವಜನಿಕರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದರು. ಬಳಿಕ ಸ್ಥಳೀಯರೂ ಸೇರಿ ಚರಂಡಿ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕತ್ತರಿಸಿ ತೆರವುಗೊಳಿಸಿ ಹುಡುಕಾಟಕ್ಕೆ ಸಹಕರಿಸಿದರು. ಸಂಜೆ 7.30ರವರೆಗೆ ಸತತ 4 ತಾಸು ಹುಡುಕಾಡಿದರೂ ಕೀ ಸಿಗಲಿಲ್ಲ. ಬಳಿಕ ಯುವಕ ಕಾರನ್ನು ಅಲ್ಲೇ ಬಿಟ್ಟು ಆಟೋದಲ್ಲಿ ಮನೆಗೆ ತೆರಳಿದನು.
ಕೀ ಹುಡುಕಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತರಹೇವಾರಿ ಚರ್ಚೆಗೆ ಗ್ರಾಸವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net