

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ತೆಂಕಎರ್ಮಾಳಿನಲ್ಲಿ ಶುಕ್ರವಾರ ಕಾರು ಅಡ್ಡಗಟ್ಟಿ ಉಡುಪಿಯ ನಾಗೇಶ್ ಎಂಬುವರಿಗೆ ಕಿರಣ್ ಕುಮಾರ್ ಮತ್ತು ಇತರ ಐವರು ಹಲ್ಲೆ ನಡೆಸಿದ್ದಾರೆ.
ಉಡುಪಿ ಅಂಗಾಕಟ್ಟೆ ನಾಗೇಶ್ ಎಂಬುವರು ಸಹೋದರ ಹಾಗೂ ಕುಟುಂಬದವರೊಂದಿಗೆ ಮಂಗಳೂರಿನಿಂದ ಉಡುಪಿಗೆ ತೆರಳುವ ಮಧ್ಯೆ ಎರ್ಮಾಳಿನ ಹೋಟೆಲೊಂದರಲ್ಲಿ ಊಟ ಮುಗಿಸಿ ಕಾರಿನ ಬಳಿ ತೆರಳುತ್ತಿದ್ದಾಗ ಆರೋಪಿಗಳು ಎರಡು ಕಾರುಗಳನ್ನು ಅಡ್ಡ ಇಟ್ಟು ಕಾರು ತೆಗೆಯದಂತೆ ಅಡ್ಡಿಪಡಿಸಿದ್ದರು. ನಂತರ ನಾಗೇಶ್ ಅವರ ಸಹೋದರನಿಗೆ ನಿನಗೆ ಕೊಟ್ಟ ಹಣ ವಾಪಸ್ ಕೊಡಲಿಕ್ಕೆ ಆಗುವುದಿಲ್ಲವೇ ಎಂದು ಹೇಳಿ ಹಲ್ಲೆ ನಡೆಸಿದ್ದರು. ಈ ವೇಳೆ ಅವರು ಆರೋಪಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು. ನಂತರ ಆರೋಪಿಗಳು ಅಂಗಾಕಟ್ಟೆ ನಾಗೇಶ್ ಅವರನ್ನು ಕಾರಿನಲ್ಲಿ ಕೂರಿಸಿ ಬಂಧಿಯಾಗಿರಿಸಿದ್ದರು.
ಮನೆಯವರು ಬೇಡಿಕೊಂಡ ನಂತರ ಅವರನ್ನು ಕಾರಿನಿಂದ ಇಳಿಸಿರುವುದಾಗಿ ನಾಗೇಶ್ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.