ಕುಂದಾಪುರ: ಹೆಮ್ಮಾಡಿಯಲ್ಲಿ ಮಂಗಳವಾರ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆೆ. ನಾಗೂರಿನ ಕೃಷ್ಣ ದೇವಾಡಿಗ ಎಂಬುವರು ತಾಯಿ ಚಂದು ಅವರನ್ನು ನಾಗೂರಿನಿಂದ ಕುಂದಾಪುರದ ಆಸ್ಪತ್ರೆಗೆ ಆಟೋರಿಕ್ಷಾದಲ್ಲಿ ಕರೆದೊಯ್ಯುತ್ತಿರುವಾಗ ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಹಾಲು ಡೇರಿ ಬಳಿ ಕಾರೊಂದು ರಿಕ್ಷಾವನ್ನು ಬಲಬದಿಯಿಂದ ಓವರ್‌ಟೇಕ್ ಮಾಡಿ ಯಾವುದೇ ಸೂಚನೆ ನೀಡದೆ ಒಮ್ಮಲೆ ತೀರ ಎಡಕ್ಕೆ ಚಲಾಯಿಸಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿದೆ.
ರಿಕ್ಷಾ ಚಾಲಕ ಸುಬ್ರಹ್ಮಣ್ಯ ಖಾರ್ವಿ, ಕೃಷ್ಣ ದೇವಾಡಿಗ ಮತ್ತು ಚಂದು ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.