ಫುಟ್ಪಾತ್‌ನಲ್ಲೇ ವ್ಯಾಪಾರ, ಪಾರ್ಕಿಂಗ್!

ಫುಟ್‌ಪಾತ್‌ನಲ್ಲೇ ವಾಹನಗಳ ಪಾರ್ಕಿಂಗ್.
ಫುಟ್‌ಪಾತ್‌ನಲ್ಲೇ ವಾಹನಗಳ ಪಾರ್ಕಿಂಗ್.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಫುಟ್‌ಪಾತ್‌ಗಳು ಪಾದಚಾರಿಗಳ ಹಕ್ಕು. ಫುಟ್‌ಪಾತ್‌ಗಳಲ್ಲಿರುವ ಬೀದಿ ವ್ಯಾಪಾರಿಗಳನ್ನು ತಕ್ಷಣ ತೆರವುಗೊಳಿಸಬೇಕು ಎಂಬ ಸಚಿವ ಕೃಷ್ಣೆ ಬೈರೇಗೌಡ ಅವರ ಆದೇಶದಂತೆ ಮಂಗಳೂರು ಮತ್ತಿತರ ನಗರಗಳಲ್ಲಿ ಫುಟ್‌ಪಾತ್‌ನಲ್ಲಿರುವ ಬೀದಿಬದಿ ವ್ಯಾಪಾರಿಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಆದರೆ ಬಂಟ್ವಾಳ ತಾಲೂಕು ಕೇಂದ್ರ ಸ್ಥಾನವಾದ ಬಿ.ಸಿ.ರೋಡಿನ ಫುಟ್‌ಪಾತ್‌ನಲ್ಲೇ ವಾಹನ ಪಾರ್ಕಿಂಗ್, ಬೀದಿ ವ್ಯಾಪಾರ ನಡೆಯುತ್ತಿದ್ದರೂ ಬಂಟ್ವಾಳ ಪುರಸಭೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.
ಬಿ.ಸಿ.ರೋಡ್ ಸುಂದರೀಕರಣದ ಭಾಗವಾಗಿ ಎಸ್‌ಸಿಡಿಸಿಸಿ ಬ್ಯಾಂಕ್ ಎಟಿಎಂ ಬಳಿಯಿಂದ ತಾಲೂಕು ಕಚೇರಿವರೆಗೆ ಫುಟ್‌ಪಾತ್ ನಿರ್ಮಿಸಲಾಗಿದೆ. ಇತ್ತ ಒಮ್ಮೆ ಗಮನ ಹರಿಸಿದರೆ ಫುಟ್‌ಪಾತ್‌ನಲ್ಲಿ ಹಣ್ಣಿನ ವ್ಯಾಪಾರ, ಫಾಸ್ಟ್‌ಪುಡ್ ಅಂಗಡಿ, ವಾಹನಗಳ ಪಾರ್ಕಿಂಗ್ ಕಂಡು ಬರುತ್ತಿದೆ. ಲಯನ್ಸ್ ಸೇವಾ ಮಂದಿರದ ಬಳಿ ಸಾರ್ವಜನಿಕರಿಗಾಗಿ ನಿರ್ಮಿಸಿರುವ ವಾಕಿಂಗ್ ಪಾತ್‌ನಲ್ಲೂ ಬೀದಿ ವ್ಯಾಪಾರ ತಲೆಎತ್ತಿದೆ. ಇದರಿಂದಾಗಿ ಫುಟ್‌ಪಾತ್‌ನಲ್ಲಿ ನಡೆದಾಡಬೇಕಾದ ಪಾದಚಾರಿಗಳು ರಸ್ತೆಯಲ್ಲಿ, ಪಾರ್ಕಿಂಗ್ ಮಾಡಿದ ವಾಹನಗಳ ನಡುವೆ ಇಕ್ಕಟ್ಟಾದ ಜಾಗದಲ್ಲಿ ನಡೆದಾಡಬೇಕಾದ ಪರಿಸ್ಥಿತಿ ಇದೆ.

ರಸ್ತೆ ಬದಿಯಲ್ಲೇ ವ್ಯಾಪಾರ

ಬಿ.ಸಿ.ರೋಡಿನ ಗಣೇಶ್ ಮೆಡಿಕಲ್ ಬಳಿ ಹಣ್ಣಿನ ಅಂಗಡಿಯೊಂದು ಹಲವು ವರ್ಷಗಳಿಂದ ಫುಟ್‌ಪಾತ್‌ಗೆ ತಾಗಿಕೊಂಡೇ ವ್ಯಾಪಾರ ಮಾಡುತ್ತಿದೆ. ಇಲ್ಲಿಗೆ ಬರುವ ಗ್ರಾಹಕರು ಫುಟ್‌ಪಾತ್‌ನಲ್ಲಿ ನಿಂತುಕೊಂಡೇ ಹಣ್ಣುಗಳನ್ನು ಖರೀದಿಸಬೇಕು. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಅಂಗಡಿಯ ಬಗ್ಗೆ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗಳು ನಡೆದಿದ್ದರೂ ಅಂಗಡಿಯನ್ನು ಫುಟ್ಪಾತ್‌ನಿಂದ ತೆರವುಗೊಳಿಸುವ ಧೈರ್ಯವನ್ನು ಪುರಸಭೆಯ ಅಧಿಕಾರಿಗಳು ತೋರಿಲ್ಲ. ನಿಯಮಗಳನ್ನು ಗಾಳಿಗೆ ತೂರಿ, ಸಾರ್ವಜನಿಕರಿಗೆ ತೊಂದರೆ ನೀಡಿ ವ್ಯಾಪಾರ ಮಾಡುವ ಅನೇಕ ಅಂಗಡಿಗಳಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ.

ವಿಫಲ ಕಾರ್ಯಾಚರಣೆ

ಬಿ.ಸಿ.ರೋಡಿನ ಬಸ್ ನಿಲ್ದಾಣದಲಿ,್ಲ ಅಂಗಡಿಗಳ ಹೊರಭಾಗದಲ್ಲಿ, ಪ್ರಯಾಣಿಕರು ನಿಲ್ಲುವ ಜಾಗದಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುವ ಬಗ್ಗೆ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದು ತೆರವುಗೊಳಿಸಲು ಕಳೆದ ಸಾಲಿನ ಕೌನ್ಸಿಲ್ ನಿರ್ಣಯ ಕೈಗೊಂಡಿತ್ತು. ಅದರಂತೆ ಕಾರ್ಯಾಚರಣೆಯನ್ನೂ ನಡೆಸಲಾಯಿತು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅತ್ತ ಹೋದ ಕೆಲವೇ ಕ್ಷಣದಲ್ಲಿ ಇತ್ತ ಮತ್ತೆ ಯಥಾಸ್ಥಿತಿಯಲ್ಲಿ ವ್ಯಾಪಾರ ಆರಂಭಗೊಂಡು ಈಗಲೂ ಮುಂದುವರಿದಿದೆ. ಅಂಗಡಿ ಮುಂಭಾಗ ಹೆಚ್ಚುವರಿ ಶೀಟ್‌ಗಳನ್ನು ಹಾಕಿ ಶೆಲ್ಟರ್ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಭರ್ಜರಿ ಸಂಡೆ ಬಜಾರ್

ಪ್ರತಿ ಭಾನುವಾರ ಬಿ.ಸಿ.ರೋಡಿನಲ್ಲಿ ಸಂಡೆ ಬಜಾರ್ ಭರ್ಜರಿಯಾಗಿ ನಡೆಯುತ್ತದೆ. ದೂರದ ಊರುಗಳಿಂದ ಬರುವ ವ್ಯಾಪಾರಿಗಳು ತರಕಾರಿ, ದಿನಸಿ ಸಾಮಗ್ರಿ, ಬಟ್ಟೆ ಮತ್ತಿತರ ವಸ್ತುಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ. ಹಿಂದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ, ಮೇಲ್ಸೇತುವೆಯ ಕೆಲಭಾಗದಲ್ಲಿ ಈ ವ್ಯಾಪಾರ ನಡೆಯುತ್ತಿತ್ತು. ಈಗ ಅದು ಅಲ್ಲಿಂದ ಫುಟ್‌ಪಾತ್‌ಗೆ ಸ್ಥಳಾಂತರಗೊಂಡಿದೆ. ಭಾನುವಾರ ತಾಲೂಕು ಆಡಳಿತ ಸೌಧದ ಬಳಿಯ ಫುಟ್‌ಪಾತ್ ಬೀದಿ ವ್ಯಾಪಾರಿಗಳಿಗೆ ಮೀಸಲು ಎಂಬಂತಾಗಿದೆ.

ಪೋಸ್ಟರ್ ಸಂಚಲನ

ಫುಟ್‌ಪಾತ್‌ನಲ್ಲಿರುವ ಬೀದಿಬದಿ ವ್ಯಾಪಾರವನ್ನು ತಕ್ಷಣ ತೆರವು ಮಾಡಿ, ಅವುಗಳನ್ನು ಪಾದಚಾರಿಗಳ ಸಂಚಾರಕ್ಕೆ ಬಿಟ್ಟುಕೊಡಬೇಕು ಎನ್ನುವ ಸಚಿವ ಕೃಷ್ಣ ಭೈರೇಗೌಡ ಅವರ ಆದೇಶಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಿ.ಸಿ.ರೋಡಿನಲ್ಲೂ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫುಟ್‌ಪಾತ್‌ಗಳನ್ನು ಪಾದಚಾರಿಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಬಿಟ್ಟುಕೊಡಿ ಎನ್ನುವ ಆಶಯವನ್ನು ಪೋಸ್ಟರ್‌ನಲ್ಲಿ ವ್ಯಕ್ತಪಡಿಸಲಾಗಿದೆ.

ಬಿ.ಸಿ.ರೋಡಿನಲ್ಲಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಕಾಯ್ದೆಯಂತೆ ಬೀದಿಬದಿ ವ್ಯಾಪಾರಿಗಳಿಗೆ ನಿರ್ದಿಷ್ಟವಾದ ಪ್ರತ್ಯೇಕ ಮಾರುಕಟ್ಟೆ ವಲಯವನ್ನು ರೂಪಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು, ಪೊಲೀಸ್ ಉಪಾಧೀಕ್ಷಕರು ಹಾಗೂ ಬಂಟ್ವಾಳ ನಗರ ಪೊಲೀಸರ ಸಭೆ ಕರೆದು ಸಾಧಕ-ಬಾಧಕಗಳನ್ನು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

— ತೀರ್ಥಪ್ರಸಾದ್, ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ

ರಸ್ತೆ ಬದಿಯ ಫುಟ್‌ಪಾತ್ ಸಾರ್ವಜನಿಕರ ಆಸ್ತಿ. ಬಿ.ಸಿ.ರೋಡಿನಲ್ಲಿ ಫುಟ್‌ಪಾತ್ ಜಾಗದಲ್ಲೇ ವ್ಯಾಪಾರ ಮಾಡುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ನಡೆದಾಡುತ್ತಾರೆ. ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುವ ವ್ಯಾಪಾರಿಗಳು ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಬಿಟ್ಟು ಕೊಡಬೇಕು.

— ಲಕ್ಷ್ಮಣ ಕುಲಾಲ್ ಅಗ್ರಬೈಲು, ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net