ಕುಂಬಳೆಯಲ್ಲಿ ಬಸ್ ನಿಲುಗಡೆ ವಿವಾದ ತೀವ್ರ

private bus
private bus
Published on
ವಿಜಯವಾಣಿ ಸುದ್ದಿಜಾಲ ಕುಂಬಳೆ
ಕುಂಬಳೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆಗೆ ವಿವಾದ ಪರಿಹಾರವಾಗದೆ ಇನ್ನಷ್ಟು ಉಲ್ಬಣಗೊಂಡಿದೆ. ಸಮಸ್ಯೆ ಪರಿಹರಿಸಲು ಆರ್‌ಟಿಒ, ಪೊಲೀಸರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿಯೂ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.
ಕುಂಬಳೆ ಪಂಚಾಯಿತಿಯಲ್ಲಿ ಎಎಸ್‌ಪಿ ಅಚ್ಯುತ್ ಅಶೋಕ್, ಕುಂಬಳೆ ಸಿಐ ಬೈಜು ಕೆ.ಜೋಸ್, ಆರ್‌ಟಿಒ ನೇತೃತ್ವದಲ್ಲಿ ನಡೆದ ಸಭೆಗೆ ಪಂಚಾಯಿತಿ ಆಡಳಿತ ಪಕ್ಷದ ಜನಪ್ರತಿನಿಧಿಗಳು, ಬ್ಲಾಕ್, ಜಿಲ್ಲಾ ಪಂಚಾಯಿತಿ ಸದಸ್ಯರು, ಬಸ್ ನೌಕರರು, ಬಸ್ ನೌಕರರ ಸಂಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಬದಿಯಡ್ಕ, ಪೆರ್ಲ, ಪೇರಾಲ್ ಕಣ್ಣೂರು ಭಾಗದಿಂದ ಬರುವ ಬಸ್‌ಗಳ ನೌಕರರು ತಮ್ಮ ಬಸ್‌ಗಳ ನಿಲುಗಡೆಗೆ ಸಂಬಂಧಿಸಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಕುಂಬಳೆಯಲ್ಲಿ ಮೂಲ ಸೌಕರ್ಯ ಕಲ್ಪಿಸದೆ ಬಸ್ ನಿಲುಗಡೆ ಸ್ಥಳವನ್ನು ದಿಢೀರ್ ಬದಲಾವಣೆ ಮಾಡಿದ ಪಂಚಾಯಿತಿ ನಿರ್ಧಾರವೇ ಸಮಸ್ಯೆಗೆ ಕಾರಣವೆಂದು ಬಸ್ ನೌಕರರು ಹೇಳಿದರು.
ಕೆಲವು ವ್ಯಾಪಾರಿಗಳ ಹಿತಾಸಕ್ತಿಗಾಗಿ ಸೀತಾಂಗೋಳಿ ಭಾಗದಿಂದ ಬರುವ ಬಸ್‌ಗಳ ನಿಲುಗಡೆ ಸ್ಥಳವನ್ನು ಬದಲಾಯಿಸಲು ಪಂಚಾಯಿತಿ ಮುಂದಾಗಿದೆ. ನಿಲುಗಡೆ ಸ್ಥಳ ಬದಲಾಯಿಸಲು ಪಂಚಾಯಿತಿ, ಪೊಲೀಸ್ ಅಥವಾ ಆರ್‌ಟಿಒದಿಂದ ತಮಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ತಿಳಿಸಿದರು.
ಬಸ್ ನೌಕರರ ಅಹವಾಲನ್ನು ಆಲಿಸಿದ ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳು, ಮೂಲ ಸೌಕರ್ಯ ನೀಡಿದ ಬಳಿಕವೇ ಬಸ್ ನಿಲುಗಡೆ ಸ್ಥಳವನ್ನು ಬದಲಾವಣೆ ಮಾಡುವಂತೆ ಪಂಚಾಯಿತಿಗೆ ಸೂಚಿಸಿದರು. ನಾವು ಕೈಗೊಂಡ ನಿರ್ಧಾರವನ್ನು ವಾತ್ರವೇ ಪೊಲೀಸ್ ಹಾಗೂ ಆರ್‌ಟಿಒ ಪಾಲಿಸಿದರೆ ಸಾಕು ಎಂದು ಪಂಚಾಯಿತಿ ಜನಪ್ರತಿನಿಧಿಗಳು ಪಟ್ಟು ಹಿಡಿದರು. ಇದನ್ನು ಒಪ್ಪಲು ಪೊಲೀಸ್, ಆರ್‌ಟಿಒ ಅಧಿಕಾರಿಗಳು ಸಿದ್ಧರಾಗಲಿಲ್ಲ. ಆಗ ಹಳೇ ಬಸ್ ನಿಲ್ದಾಣಕ್ಕೆ ಪ್ರವೇಶಿಸದ ಬಸ್‌ಗಳನ್ನು ತಡೆಹಿಡಿಯುವುದಾಗಿ ತಿಳಿಸಿ ಪಂಚಾಯಿತಿ ಜನಪ್ರತಿನಿಧಿಗಳು ಸಭೆಯಿಂದ ಹೊರನಡೆದರು. ಬಸ್‌ಗಳನ್ನು ತಡೆದಲ್ಲಿ ಪ್ರತಿಭಟಿಸುವುದಾಗಿ ಬಸ್ ನೌಕರರು ತಿಳಿಸಿದರು. ಬಸ್ ನಿಲುಗಡೆ ಸಮಸ್ಯೆ ಬಗೆಹರಿಸಲು ಕರೆದಿದ್ದ ಸಭೆ ಮತ್ತಷ್ಟು ಸಮಸ್ಯೆಗೆ ಕಾರಣವಾಯಿತೇ ಹೊರತು ಪರಿಹಾರ ಕಂಡುಕೊಳ್ಳಲು ಸಫಲವಾಗಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net